ಸಾಕ್ಷರತೆಯಲ್ಲಿ ಮುಂದಿರುವ ಕೇರಳ ಈ ಪ್ರಮುಖ ವಿಚಾರದಲ್ಲಿ ಭಾರೀ ಹಿಂದೆ!

Update: 2018-10-14 14:24 GMT

ತಿರುವನಂತಪುರಂ,ಅ.14: ಮಾನವ ಅಭಿವೃದ್ಧಿಯ ಅನೇಕ ಸೂಚಿಗಳಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ಕೇರಳದ ಬಹುತೇಕ ಜನರಿಗೆ ಎಮರ್ಜೆನ್ಸಿ ಕಿಟ್‌ಗಳು ಮತ್ತು ವಿಪತ್ತಿನ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕಾ ಕ್ರಮಗಳ ಬಗ್ಗೆ ತಿಳಿದಿಲ್ಲ ಎಂದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕರಾವಳಿ ರಾಜ್ಯದಲ್ಲಿ ಕೋಲಾಹಲವನ್ನು ಎಬ್ಬಿಸಿದ ನೆರೆ ಹಾವಳಿಯ ಎರಡು ತಿಂಗಳ ನಂತರ ರಾಜ್ಯಾದ್ಯಂತ ನಡೆಸಲಾದ ಸಮೀಕ್ಷೆಯಲ್ಲಿ ಕೇರಳದ ಮೂರನೇ ಎರಡರಷ್ಟು ಮಂದಿಗೆ ವಿಪತ್ತನ್ನು ಎದುರಿಸಲು ಸಿದ್ಧತೆ ನಡೆಸುವ ಬಗ್ಗೆ ಅಥವಾ ಎಮರ್ಜೆನ್ಸಿ ಕಿಟ್ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂಬುದು ಬೆಳಕಿಗೆ ಬಂದಿದೆ. ಕೇರಳವು ಅತಿಹೆಚ್ಚು ಸಾಕ್ಷರತೆ, ಶಿಶು ಮರಣದಲ್ಲಿ ಇಳಿಕೆ ಮತ್ತು ಅತಿಹೆಚ್ಚು ಜೀವನಾವಧಿ ದರ ಇತ್ಯಾದಿಗಳನ್ನು ಹೊಂದಿರುವ ಹೆಗ್ಗಳಿಕೆ ಪಡೆದಿದೆ. ಆದರೆ ಇಲ್ಲಿನ ಶೇ.66.77 ಜನರಿಗೆ ವಿಪತ್ತಿನ ಸಮಯದಲ್ಲಿ ಬಳಸಬೇಕಾದ ತುರ್ತು ಸಾಧನಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಕೇರಳ ರಾಜ್ಯ ಸಾಕ್ಷರತಾ ಅಭಿಯಾನ (ಕೆಎಲ್‌ಎಸ್‌ಎಂ) ನಡೆಸಿದ ‘ವಾಟ್ ದ ಫ್ಲಡ್ ಎಫೆಕ್ಟೆಡ್ ಕೇರಳ ಥಿಂಕ್ಸ್’ ಹೆಸರಿನ ಸಮೀಕ್ಷೆಯ ವರದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು. 50,000 ವಿದ್ಯಾರ್ಥಿಗಳ ಸಹಾಯದೊಂದಿಗೆ ನಡೆಸಲಾದ ಸಮೀಕ್ಷೆಯಲ್ಲಿ ಕೇರಳದ 14 ಜಿಲ್ಲೆಗಳಲ್ಲಿರುವ 2.91 ಲಕ್ಷ ಮನೆಗಳಿಗೆ ತೆರಳಿ ಜನರ ಜೊತೆ ಸಮಾಲೋಚನೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News