ಭದ್ರತಾ ಅಧಿಕಾರಿಯಿಂದ ಗುಂಡಿನ ದಾಳಿ: ಗಾಯಗೊಂಡ ನ್ಯಾಯಾಧೀಶರ ಪತ್ನಿ ಸಾವು, ಪುತ್ರನ ಸ್ಥಿತಿ ಚಿಂತಾಜನಕ

Update: 2018-10-14 14:29 GMT

ಗುರ್ಗಾಂವ್, ಅ. 14: ಇಲ್ಲಿನ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಕಾಂತ್ ಶರ್ಮಾ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ಗುರ್ಗಾಂವ್‌ನ ಮಾರುಕಟ್ಟೆಯಲ್ಲಿ ಶನಿವಾರ ಮಧ್ಯಾಹ್ನ ಹಾರಿಸಿದ ಗುಂಡಿನಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನ್ಯಾಯಾಧೀಶರ ಪತ್ನಿ ಹಾಗೂ ಪುತ್ರರಲ್ಲಿ ಪತ್ನಿ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಪುತ್ರನ ಸ್ಥಿತಿ ಚಿಂತಾಜನಕವಾಗಿದೆ.

  ಗುರ್ಗಾಂವ್‌ನ ಸೆಕ್ಟರ್ 49ರ ಅರ್ಕಾಡಿಯಾ ಮಾರುಕಟ್ಟೆ ಸಮೀಪ ಅಪರಾಹ್ನ 3.30ಕ್ಕೆ ಈ ಘಟನೆ ನಡೆದಿದೆ. ನ್ಯಾಯಾಧೀಶರ ವೈಯಕ್ತಿಕ ಭದ್ರತಾ ಅಧಿಕಾರಿ ಮಹಿಪಾಲ್ ಸಿಂಗ್ ಮಾರುಕಟ್ಟೆಯಲ್ಲಿ ಶಾಪಿಂಗ್ ನಡೆಸುತ್ತಿದ್ದ ನ್ಯಾಯಾಧೀಶರ ಪತ್ನಿ ರಿತು (38) ಹಾಗೂ ಪುತ್ರ (ಧ್ರುವ)ನನ್ನು ಗುರಿಯಾಗಿರಿಸಿ ಗುಂಡು ಹಾರಿಸಿದ್ದಾರೆ. ತಾಯಿ ಹಾಗೂ ಮಗನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಹಿಪಾಲ್ ಸಿಂಗ್ ತನ್ನ ಸೇವಾ ರಿವಾಲ್ವರ್ ಬಳಸಿ ನ್ಯಾಯಮೂರ್ತಿ ಅವರ ಪತ್ನಿಯ ಎದೆ ಹಾಗೂ ಪುತ್ರನ ತಲೆಗೆ ತೀರಾ ಸಮೀಪದಿಂದ ಗುಂಡು ಹಾರಿಸಿರುವುದಾಗಿ ಪತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಹಿಪಾಲ್ ಸಿಂಗ್ ಧ್ರುವನನ್ನು ಹೋಂಡಾ ಸಿಟಿ ಕಾರಿನ ಒಳಗೆ ಎಳೆದೊಯ್ದು, ಪರಾರಿಯಾಗಿರುವುದನ್ನು ಪ್ರತ್ಯಕ್ಷದರ್ಶಿಗಳು ದಾಖಲಿಸಿದ ವೀಡಿಯೊದಲ್ಲಿ ಸೆರೆಯಾಗಿದೆ.

 ಕಾರಿನಲ್ಲಿ ಪರಾರಿಯಾದ ಮಹಿಪಾಲ್ ಸಿಂಗ್ ಅವರನ್ನು ಫರೀದಾಬಾದ್‌ನಲ್ಲಿ ಬಂಧಿಸಲಾಯಿತು. ಅನಂತರ ವಿಚಾರಣೆಗೆ ಒಳಪಡಿಸಲಾಯಿತು. ಆರೋಪಿ ತೀವ್ರ ಖಿನ್ನತೆ ಹಾಗೂ ಮಾನಸಿಕ ಅಸ್ವಸ್ತತೆಗೆ ಗುರಿಯಾಗಿದ್ದಾನೆ. ಕೊಲೆಯ ಹಿಂದಿನ ಕಾರಣ ತಿಳಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಪರಾರಿಯಾಗುತ್ತಿರುವಾಗ ಆರೋಪಿ ಮಹಿಪಾಲ್ ಸಿಂಗ್ ದೂರವಾಣಿ ಕರೆ ಮಾಡಿ ನ್ಯಾಯಮೂರ್ತಿ ಕೃಷ್ಣಕಾಂತ್ ಶರ್ಮಾ ಅವರಿಗೆ, ‘‘ನಾನು ನಿಮ್ಮ ಪತ್ನಿ ಹಾಗೂ ಪುತ್ರನ ಮೇಲೆ ಗುಂಡು ಹಾರಿಸಿದ್ದೇನೆ.’’ ಎಂದಿದ್ದಾರೆ. ಮಹಿಪಾಲ್ ಸಿಂಗ್ ತನ್ನ ತಾಯಿ ಹಾಗೂ ಇತರ ಕೆಲವರಿಗೆ ಕೂಡ ದೂರವಾಣಿ ಕರೆ ಮಾಡಿ ಗುಂಡು ಹಾರಿಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News