ಭಾರತ-ಪಾಕಿಸ್ತಾನ ಗಡಿಯಲ್ಲಿ ರಾಜನಾಥ್ ಸಿಂಗ್‌ರಿಂದ ದಸರಾ ಆಚರಣೆ

Update: 2018-10-14 14:31 GMT

ಹೊಸದಿಲ್ಲಿ, ಅ. 14: ಅತಿಸೂಕ್ಷ್ಮ ಭಾರತ-ಪಾಕ್ ಗಡಿಯ ಬಿಕೇನರ್‌ನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ದಸರಾ ಆಚರಿಸಲಿದ್ದಾರೆ ಹಾಗೂ ಶಸ್ತ್ರಪೂಜೆ ನಡೆಸಲಿದ್ದಾರೆ.

ಭಾರತ-ಪಾಕಿಸ್ತಾನ ಗಡಿಯಲ್ಲಿ ಕೇಂದ್ರ ಸರಕಾರದ ಹಿರಿಯ ಸಚಿವರೊಬ್ಬರು ಶಶ್ತ್ರ ಪೂಜೆ ನಡೆಸುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ಗಡಿಯ ಬಿಕೇನರ್‌ನಲ್ಲಿ ಅಕ್ಟೋಬರ್ 19ರಂದು ಗಡಿ ಭದ್ರತಾ ಪಡೆಯ ಯೋಧರೊಂದಿಗೆ ಗೃಹ ಸಚಿವರು ದಸರಾ ಆಚರಿಸಲಿದ್ದಾರೆ.

ದಸರಾದ ಭಾಗವಾಗಿ ಮುಂಚೂಣಿ ಪ್ರದೇಶದಲ್ಲಿರುವ ಗಡಿ ಹೊರ ಠಾಣೆಯಲ್ಲಿ ಸಿಂಗ್ ಅವರು ಶಸ್ತ್ರ ಪೂಜೆ ನೆರವೇರಿಸಲಿದ್ದಾರೆ.

ಎರಡು ದಿನಗಳ ಭೇಟಿ ಹಿನ್ನೆಲೆಯಲ್ಲಿ ಗೃಹ ಸಚಿವರು ಅಕ್ಟೋಬರ್ 18ರಂದು ಬಿಕೇನರ್‌ಗೆ ಆಗಮಿಸಲಿದ್ದಾರೆ. ಅಕ್ಟೋಬರ್ 19ರಂದು ಯೋಧರೊಂದಿಗೆ ಹಬ್ಬ ಆಚರಿಸುವ ಮುನ್ನಾ ದಿನ ಗಡಿ ಹೊರ ಠಾಣೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಗಡಿ ಪರಿಸ್ಥಿತಿ ಬಗ್ಗೆ ಸಿಂಗ್ ಅವರು ಪರಿಶೀಲನೆ ನಡೆಸಲಿದ್ದಾರೆ. ವಿವಿಧ ಮೂಲಭೂತ ಸೌಕರ್ಯಗಳ ಪ್ರಗತಿ ಬಗ್ಗೆ ವೌಲ್ಯ ಮಾಪನ ಮಾಡಲಿದ್ದಾರೆ.

ಅವರು ‘ಬಡಾ ಖಾನಾ’ (ಯೋಧರೊಂದಿಗೆ ಭೋಜನ) ದಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News