‘ಮೀ ಟೂ’ ಅಭಿಯಾನ: ಆರೋಪ ಸಾಬೀತಾದವರೊಂದಿಗೆ ಕೆಲಸ ಮಾಡದಿರಲು 11 ನಿರ್ದೇಶಕಿಯರ ನಿರ್ಧಾರ
ಮುಂಬೈ,ಅ.14: ಚಲನಚಿತ್ರೋದ್ಯಮದ ಹಲವರು ಲೈಂಗಿಕ ಕಿರುಕುಳ ಮತ್ತು ದುರ್ವರ್ತನೆಯ ಆರೋಪಗಳನ್ನು ಹೊತ್ತು ‘ಮೀ ಟೂ’ ಅಭಿಯಾನದ ಸುಳಿಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ತಮ್ಮ ಬೆಂಬಲದ ದ್ಯೋತಕವಾಗಿ ಆರೋಪ ಸಾಬೀತಾದವರೊಂದಿಗೆ ತಾವು ಕೆಲಸ ನಿರ್ವಹಿಸುವುದಿಲ್ಲ ಎಂದು ಬಾಲಿವುಡ್‌ನ 11 ಚಿತ್ರನಿರ್ದೇಶಕಿಯರು ಹೇಳಿದ್ದಾರೆ.
ಅಲಂಕೃತಾ ಶ್ರೀವಾಸ್ತವ,ಕೊಂಕಣಾ ಸೇನ್ ಶರ್ಮಾ,ಗೌರಿ ಶಿಂಧೆ,ಮೇಘನಾ ಗುಲ್ಝಾರ್,ನಂದಿತಾ ದಾಸ್,ರೆಯಾ ಅಖ್ತರ್,ನಿತ್ಯಾ ಮೆಹ್ರಾ,ರೀಮಾ ಕಾಗ್ತಿ, ಸೋನಾಲಿ ಬೋಸ್,ರುಚಿ ನಾರಾಯಣ್ ಮತ್ತು ಕಿರಣ್ ರಾವ್ ಅವರು ಈ ನಿರ್ದೇಶಕಿಯರಲ್ಲಿ ಸೇರಿದ್ದಾರೆ.
“ಮಹಿಳೆಯರು ಮತ್ತು ಚಿತ್ರ ನಿರ್ದೇಶಕಿಯರಾಗಿ ‘ಮೀ ಟೂ’ ಇಂಡಿಯಾ ಚಳವಳಿಯನ್ನು ಬೆಂಬಲಿಸಲು ನಾವು ಒಗ್ಗಟ್ಟಾಗಿದ್ದೇವೆ. ತಾವು ಅನುಭವಿಸಿರುವ ಕಿರುಕುಳ ಮತ್ತು ಲೈಂಗಿಕ ಹಲ್ಲೆಗಳ ಬಗ್ಗೆ ಧೈರ್ಯದಿಂದ ಹೇಳಿಕೊಳ್ಳುತ್ತಿರುವ ಮಹಿಳೆಯರೊಂದಿಗೆ ನಾವಿದ್ದೇವೆ. ಅವರ ಧೈರ್ಯವು ಸ್ವಾಗತಾರ್ಹ ಬದಲಾವಣೆಯ ಕ್ರಾಂತಿಗೆ ನಾಂದಿ ಹಾಡಿರುವುದರಿಂದ ನಾವು ಅವರನ್ನು ಗೌರವಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ” ಎಂದು ಹೇಳಿಕೆಯೊಂದರಲ್ಲಿ ಈ ನಿರ್ದೇಶಕಿಯರು ತಿಳಿಸಿದ್ದಾರೆ.
ಕೆಲಸದ ಸ್ಥಳಗಳಲ್ಲಿ ಪ್ರತಿಯೊಬ್ಬರಿಗೂ ಸುರಕ್ಷಿತವಾದ ಮತ್ತು ಸಮಾನವಾದ ವಾತಾವರಣ ಸೃಷ್ಟಿಗೆ ನೆರವಾಗಲು ನಾವು ಉದ್ದೇಶಿಸಿದ್ದೇವೆ. ಆರೋಪ ಸಾಬೀತಾದವರೊಂದಿಗೆ ಕೆಲಸ ನಿರ್ವಹಿಸದಿರಲು ನಾವು ನಿರ್ಧರಿಸಿದ್ದೇವೆ. ಚಿತ್ರರಂಗದಲ್ಲಿಯ ನಮ್ಮ ಎಲ್ಲ ಸ್ನೇಹಿತರೂ ಇದೇ ನಿಲುವನ್ನು ತಳೆಯುವಂತೆ ನಾವು ಆಗ್ರಹಿಸುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಅ.5ರಿಂದ ಆರಂಭಗೊಂಡಿರುವ ಮೀ ಟೂ ಆಭಿಯಾನದಲ್ಲಿ ಬಾಲಿವುಡ್ ನಟರಾದ ನಾನಾ ಪಾಟೇಕರ ಮತ್ತು ಅಲೋಕನಾಥ್,ನಿರ್ದೇಶಕರಾದ ಸಾಜಿದ್ ಖಾನ್ ಮತ್ತು ವಿಕಾಸ್ ಬಹ್ಲ್,ನಟ-ನಿರ್ದೇಶಕ ರಜತ್ ಕಪೂರ್ ಮುಂತಾದವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿವೆ.