×
Ad

ಬುಲೆಟ್ ರೈಲು ನಿಲ್ದಾಣಗಳ ಅಭಿವೃದ್ಧಿಯಲ್ಲಿ ಭಾರತೀಯ ವಾಸ್ತುಶಿಲ್ಪಿಗಳಿಗೆ ಜಪಾನಿ ತಜ್ಞರ ನೆರವು

Update: 2018-10-14 20:21 IST

ಹೊಸದಿಲ್ಲಿ,ಅ.14: 12 ಬುಲೆಟ್ ರೈಲು ನಿಲ್ದಾಣಗಳು ಮತ್ತು ಸುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಭಾರತೀಯ ವಾಸ್ತುಶಿಲ್ಪಿಗಳೊಂದಿಗೆ ಜಪಾನಿ ತಜ್ಞರು ಕೈಜೋಡಿಸಲಿದ್ದಾರೆ.

ಮುಂಬೈ ನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮತ್ತು ಗುಜರಾತ್‌ನ ನಗರಾಭಿವೃದ್ಧಿ ಹಾಗೂ ಮುನ್ಸಿಪಲ್ ಆಯುಕ್ತರ ಸಭೆಯಲ್ಲಿ ನಿಲ್ದಾಣಗಳ ಸುತ್ತಲಿನ ಪ್ರದೇಶಗಳಿಗೆ ಬಸ್,ಮೆಟ್ರೋ ಮತ್ತು ಇತರ ಸಾರಿಗೆಗಳೊಂದಿಗೆ ಸಂಪರ್ಕ ಕಲ್ಪಿಸಿ ಅವುಗಳನ್ನು ಅಭಿವೃದ್ಧಿಗೊಳಿಸಲು ಜಪಾನಿ ತಜ್ಞರ ನೆರವು ಪಡೆಯಲು ನಿರ್ಧರಿಸಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಿಯಾ, ಸೂರತ್, ಭರೂಚ್, ಬರೋಡಾ, ಆನಂದ್, ಸಾಬರಮತಿ ಮತ್ತು ಅಹ್ಮದಾಬಾದ್ ಇವು ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಮಾರ್ಗದಲ್ಲಿಯ 12 ನಿಲ್ದಾಣಗಳಾಗಿವೆ.

ಪ್ರತಿ ನಿಲ್ದಾಣವನ್ನೂ ಹೊರಜಗತ್ತಿನೊಂದಿಗೆ ಸುಗಮ ಸಂಪರ್ಕ ವ್ಯವಸ್ಥೆಯೊಂದಿಗೆ ವಾಣಿಜ್ಯ ಕೇಂದ್ರವನ್ನಾಗಿಸಲು ವಿಶೇಷ ಯೋಜನೆಯನ್ನು ರೈಲ್ವೆಯು ಹಮ್ಮಿಕೊಂಡಿದೆ. ಈ ಯೋಜನೆಯಡಿ ಕೆಲವು ನಿಲ್ದಾಣಗಳ ಸಮೀಪ ವಸತಿ ಸಂಕೀರ್ಣಗಳನ್ನು ನಿರ್ಮಿಸಲೂ ಅವಕಾಶವಿದೆ ಎಂದು ಅಧಿಕಾರಿ ತಿಳಿಸಿದರು.

ನಿಲ್ದಾಣಗಳು ರೆಸ್ಟೋರೆಂಟ್‌ಗಳು,ಮಾಲ್‌ಗಳು ಮತ್ತು ವಾಹನಗಳ ಪಾರ್ಕಿಂಗ್,ವಿದೇಶಿ ವಿನಿಮಯ ಕೌಂಟರ್‌ಗಳಂತಹ ವಾಣಿಜ್ಯ ಚಟುವಟಿಕೆಗಳಿಗೆ ಸ್ಥಳಾವಕಾಶ ಕಲ್ಪಿಸಲಿವೆ, ಜೊತೆಗೆ ಬುಲೆಟ್ ರೈಲು ಜಾಲ ಮತ್ತು ಮೆಟ್ರೋ ಹಾಗೂ ಬಸ್‌ನಂತಹ ಇತರ ಸಾರಿಗೆ ಸೇವೆಗಳ ನಡುವೆ ಸುಗಮ ಸಂಪರ್ಕ ರೂಪಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲಗಳನ್ನು ಒದಗಿಸಲಾಗುವುದು. ಈ ನಿಲ್ದಾಣಗಳು ನೆರೆಕರೆಯ ಪ್ರದೇಶಗಳೊಂದಿಗೆ ಸೂಕ್ತ ಸಂಪರ್ಕ ಹೊಂದಿರದಿದ್ದರೆ ಬುಲೆಟ್ ರೈಲುಗಳು ಪ್ರಯಾಣಿಕರನ್ನು ಆಕರ್ಷಿಸುವುದು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಬುಲೆಟ್ ರೈಲುಗಳು ಪ್ರತಿ ಗಂಟೆಗೆ 350 ಕಿ.ಮೀ.ವೇಗದೊಂದಿಗೆ 508 ಕಿ.ಮೀ.ಅಂತರವನ್ನು ಎರಡು ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ಸದ್ಯದ ರೈಲುಗಳು ಈ ಅಂತರವನ್ನು ಕ್ರಮಿಸಲು ಏಳು ಗಂಟೆಗೂ ಅಧಿಕ ಮತ್ತು ವಿಮಾನಗಳು ಸುಮಾರು ಒಂದು ಗಂಟೆ ಸಮಯವನ್ನು ತೆಗೆದುಕೊಳ್ಳುತ್ತಿವೆ.

ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಚಲಿಸುವ ಬುಲೆಟ್ ರೈಲುಗಳು ಸೂರತ್ ಮತ್ತು ವಡೋದರಾ ಸೇರಿದಂತೆ ಕೆಲವೇ ನಿಲ್ದಾಣಗಳಲ್ಲಿ ನಿಲುಗಡೆಯಾದರೆ,ಇತರ ಬುಲೆಟ್ ರೈಲುಗಳು ಎಲ್ಲ ನಿಲ್ದಾಣಗಳಲ್ಲಿಯೂ ನಿಲುಗಡೆಗೊಳ್ಳಲಿವೆ.

12 ನಿಲ್ದಾಣಗಳು ಮತ್ತು ಅವುಗಳ ಸುತ್ತಲಿನ ಸ್ಥಳಗಳ ಅಭಿವೃದ್ಧಿಯು ಈ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ವರದಾನವಾಗಲಿದೆ.

1,10,000 ಕೋ.ರೂ.ವೆಚ್ಚದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಜಪಾನ್ 0.1 ಬಡ್ಡಿದರದಲ್ಲಿ 88,0000 ಕೋ.ರೂ.ಗಳ ಮೃದುಸಾಲವನ್ನು ನೀಡಲಿದೆ. ರೈಲು ಮಾರ್ಗವು ಆ.2022ರ ವೇಳೆಗೆ ಕಾರ್ಯಾಚರಣೆಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News