ಮರಾಠಾ ದೊರೆಯ ಕುರಿತು ಅವಮಾನಕಾರಿ ಹೇಳಿಕೆ: ಪಠ್ಯಪುಸ್ತವನ್ನು ಹಿಂದೆಗೆದುಕೊಂಡ ಮಹಾರಾಷ್ಟ್ರ ಸರಕಾರ

Update: 2018-10-14 14:55 GMT
ಸಾಂದರ್ಭಿಕ ಚಿತ್ರ

ಪುಣೆ,ಅ.14: ಮರಾಠಾ ದೊರೆ ಸಂಭಾಜಿ ಮಹಾರಾಜ್ ಕುರಿತು ಅವಮಾನಕಾರಿ ಉಲ್ಲೇಖಗಳಿವೆ ಎನ್ನಲಾದ,ಡಾ.ಶುಭಾ ಸಾಠೆ ಅವರು ರಚಿಸಿರುವ ‘ಶ್ರೀ ಸಮರ್ಥ ರಾಮದಾಸ ಸ್ವಾಮಿ’ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸದಂತೆ ಮಹಾರಾಷ್ಟ್ರ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಂಎಸ್‌ಸಿಇಆರ್‌ಟಿ)ಯು ರಾಜ್ಯದಲ್ಲಿಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಿದೆ. ಈ ಪುಸ್ತಕವನ್ನು ಸರ್ವ ಶಿಕ್ಷಾ ಅಭಿಯಾನ ಪೂರಕ ಪಠ್ಯವನ್ನಾಗಿ ಅಂಗೀಕರಿಸಲಾಗಿತ್ತು.

ಪುಸ್ತಕದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಕುರಿತು ಅವಮಾನಕಾರಿ ಉಲ್ಲೇಖಗಳಿವೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ ಮತ್ತು ಈ ಬಗ್ಗೆ ತನಿಖೆ ನಡೆಸಲು ಇತಿಹಾಸ ತಜ್ಞರ ಸಮಿತಿಯೊಂದನ್ನು ನೇಮಿಸಲಾಗಿದೆ. ಮುಂದಿನ ನಿರ್ದೇಶದವರೆಗೆ ಈ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಬಾರದು ಮತ್ತು ಪುಸ್ತಕದ ಎಲ್ಲ ಪ್ರತಿಗಳು ಆಯಾ ಶಾಲಾ ಪ್ರಾಂಶುಪಾಲರ ವಶದಲ್ಲಿರಬೇಕು ಎಂದು ಆದೇಶಿಸಲಾಗಿದೆ ಎಂದು ಎಂಎಸ್‌ಸಿಇಆರ್‌ಟಿಯ ಉಪ ನಿರ್ದೇಶಕ ವಿಕಾಸ್ ಗರಡ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಎಂಎಸ್‌ಸಿಇಆರ್‌ಟಿ ಆದೇಶಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಧನಂಜಯ ಮುಂಧೆ ಅವರು,ಕೇವಲ ಪುಸ್ತಕದ ವಿತರಣೆಯನ್ನು ನಿಲ್ಲಿಸಿದರೆ ಸಾಲದು. ಲೇಖಕಿ ಮತ್ತು ಪ್ರಕಾಶಕರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು. ಶಿಕ್ಷಣ ಸಚಿವ ವಿನೋದ ತಾವ್ಡೆ ಅವರು ಜನತೆಯ ಕ್ಷಮೆ ಕೋರಬೇಕು ಮತ್ತು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News