ಗುಜರಾತ್: ಬಿಹಾರಿ ಕಾರ್ಮಿಕನ ಸಾವು ಕೊಲೆ ಎಂದ ಕುಟುಂಬಸ್ಥರು

Update: 2018-10-14 14:58 GMT

ಸೂರತ್,ಅ.14: ಕಾರ್ಮಿಕ ಗುತ್ತಿಗೆದಾರನಾಗಿ ದುಡಿಯುತ್ತಿದ್ದ ಬಿಹಾರ ಮೂಲದ ಅಮರಜೀತ್ ಸಿಂಗ್(32) ಎಂಬಾತ ಶುಕ್ರವಾರ ಮಧ್ಯರಾತ್ರಿಯ ಸುಮಾರಿಗೆ ಇಲ್ಲಿಯ ಅಲ್ಥಾನ್ ಎಂಬಲ್ಲಿ ನಿಗೂಢ ಸಾವನ್ನಪ್ಪಿದ್ದು,ಇದೊಂದು ಕೊಲೆ ಎಂದು ಆತನ ಕುಟುಂಬವು ಆರೋಪಿಸಿದ್ದರೆ, ಆತನ ಬೈಕ್ ಮರಕ್ಕೆ ಢಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.

 ಸೆ.28ರಂದು ಸಬರಕಾಂತಾ ಜಿಲ್ಲೆಯಲ್ಲಿ 14 ತಿಂಗಳು ಪ್ರಾಯದ ಹೆಣ್ಣುಮಗುವಿನ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಿಹಾರಿ ಯುವಕನನ್ನು ಪೊಲೀಸರು ಬಂಧಿಸಿದ ಬಳಿಕ ಗುಜರಾತ್‌ನ ಆರು ಜಿಲ್ಲೆಗಳಲ್ಲಿ ವಲಸಿಗ ಕಾರ್ಮಿಕರ ವಿರುದ್ಧ ಹಿಂಸಾಚಾರ ಭುಗಿಲೆದ್ದಿದ್ದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಹಿಂಸಾಚಾರದಿಂದಾಗಿ 60,000ಕ್ಕೂ ಅಧಿಕ ಹಿಂದಿ ಭಾಷಿಕರು ಗುಜರಾತ್ ತೊರೆದಿದ್ದಾರೆ.

ಬಿಹಾರದ ಗಯಾ ಜಿಲ್ಲೆಯ ಸಿಂಗ್ ಕಳೆದ 15 ವರ್ಷಗಳಿಂದಲೂ ಸೂರತ್‌ನಲ್ಲಿ ವಾಸವಾಗಿದ್ದ. ನಗರದ ಮಿಲ್ಲೊಂದರಲ್ಲಿ ಆತ ಕೆಲಸ ಮಾಡುತ್ತಿದ್ದ. ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ಭಗವಾನ್ ಮಹಾವೀರ ಕಾಲೇಜಿನ ಬಳಿ ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಸಿಂಗ್‌ನನ್ನು ದಾರಿಹೋಕರು ಆಸ್ಪತ್ರೆಗೆ ಸಾಗಿಸಿದ್ದರಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ. ಸಿಂಗ್ ತಲೆಯ ಹಿಂಭಾಗಕ್ಕೆ ಗಾಯವಾಗಿತ್ತು ಮತ್ತು ಆತನ ಬೈಕ್ ಹಾನಿಗೀಡಾದ ಸ್ಥಿತಿಯಲ್ಲಿ ಸ್ಥಳದಲ್ಲಿ ಬಿದ್ದಿತ್ತು ಎಂದು ಆತನ ಕುಟುಂಬಿಕರು ಹೇಳಿದ್ದಾರೆ.

ನನ್ನ ಸೋದರನಿಗೆ ರಾತ್ರಿ 10 ಗಂಟೆಯ ಸುಮಾರಿಗೆ ದೂರವಾಣಿ ಕರೆ ಬಂದಿದ್ದು,ಆತ ಯಾರನ್ನೋ ಭೇಟಿಯಾಗಲು ತೆರಳಿದ್ದ. ಕೆಲಹೊತ್ತಿನ ನಂತರ ಆತ ಸತ್ತಿದ್ದಾನೆಂಬ ಮಾಹಿತಿ ನಮಗೆ ಲಭಿಸಿತ್ತು. ದುಷ್ಕರ್ಮಿಗಳ ಗುಂಪು ಆತನ ಕೊಲೆ ಮಾಡಿದೆ ಎಂದು ಸಿಂಗ್ ಸೋದರ ರಾಕೇಶ ಸುದ್ದಿಗಾರರಿಗೆ ತಿಳಿಸಿದ.

ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸ್ ಆಯುಕ್ತ ಸತೀಶ ಶರ್ಮಾ ಅವರು,ಬೈಕ್‌ನ ಅತಿಯಾದ ವೇಗದಿಂದ ಅಪಘಾತ ಸಂಭವಿಸಿರುವುದು ಸ್ಥಳ ಪರಿಶೀಲನೆಯಿಂದ ಸ್ಪಷ್ಟವಾಗಿದೆ. ಆತನ ಮೊಬೈಲ್ ಫೋನ್ ಕಾಣೆಯಾಗಿದ್ದು, ಅದಕ್ಕಾಗಿ ನಾವು ಹುಡುಕಾಡುತ್ತಿದ್ದೇವೆ. ಘಟನೆಯ ಬಗ್ಗೆ ಪರಿಶೀಲಿಸಲು ಸಿಸಿಟಿವಿ ಫೂಟೇಜ್‌ಗಳನ್ನು ಸಂಗ್ರಹಿಸುತ್ತಿದ್ದೇವೆ,ಜೊತೆಗೆ ಸಿಂಗ್‌ನ ಕರೆ ದಾಖಲೆಯನ್ನೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News