ನಕಲಿ ಎನ್ ಕೌಂಟರ್ ಪ್ರಕರಣ: ಮೇಜರ್ ಜನರಲ್ ಸೇರಿ 7 ಮಂದಿಗೆ ಜೀವಾವಧಿ ಶಿಕ್ಷೆ

Update: 2018-10-14 17:15 GMT

ಗುವಾಹತಿ, ಅ. 14: ಇಪ್ಪತ್ನಾಲ್ಕು ವರ್ಷ ಹಳೆಯ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಮೇಜರ್ ಜನರಲ್ ಸಹಿತ 7 ಮಂದಿ ಸೇನಾ ಸಿಬ್ಬಂದಿಯನ್ನು ಸೇನಾ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

  ಈ ವಿಷಯವನ್ನು ದಿಬ್ರುಗಢದಲ್ಲಿರುವ ಭಾರತೀಯ ಸೇನಾ ಘಟಕದ ನೆಲೆ ದೃಢಪಡಿಸಿದೆ. 1994ರಲ್ಲಿ ಅಸ್ಸಾಂನ ತೀನ್‌ಸುಕಿಯಾದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಅಪರಾಧದಲ್ಲಿ ಮೇಜರ್ ಜನರಲ್ ಎ.ಕೆ. ಲಾಲ್, ಕರ್ನಲ್ ಥೋಮಸ್ ಮ್ಯಾಥ್ಯೂ, ಕರ್ನಲ್ ಆರ್.ಎಸ್. ಸಿಬಿರೆನ್, ಕ್ಯಾಪ್ಟನ್ ದಿಲೀಪ್ ಸಿಂಗ್, ಕ್ಯಾಪ್ಟನ್ ಜಗದೇವ್ ಸಿಂಗ್, ನಾಯಕ್ ಅಲ್ಬಿಂದರ್ ಸಿಂಗ್ ಹಾಗೂ ನಾಯಕ್ ಶಿವೇಂದರ್ ಸಿಂಗ್‌ಗೆ ಸೇನಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಅದು ಹೇಳಿದೆ.

ಚಹಾ ತೋಟದ ಕಾರ್ಯನಿರ್ವಹಣಾಧಿಕಾರಿಯ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ 1984 ಫೆಬ್ರವರಿ 18ರಂದು ಅಸ್ಸಾಂನ ತೀನ್‌ಸುಕಿಯಾ ಜಿಲ್ಲೆಯ ವಿವಿಧ ಪ್ರದೇಶದಿಂದ ಸೇನೆ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು ಎಂದು ಅಸ್ಸಾಂನ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜಗದೀಶ್ ಭುಯಾನ ಹೇಳಿದ್ದಾರೆ. ಇವರಲ್ಲಿ 5 ಮಂದಿಯನ್ನು ಯೋಧರು ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆಗೈದಿದ್ದರು. ಕೆಲವು ದಿನಗಳ ನಂತರ ಈ ಹತ್ಯೆಯನ್ನು ಉಲ್ಫಾಗಳ ತಲೆಗೆ ಕಟ್ಟಿದ್ದರು. ನಾಲ್ವರನ್ನು ಬಿಡುಗಡೆ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News