ಸಂಪೂರ್ಣ ಸಾವಯವ ರಾಜ್ಯ ಸಿಕ್ಕಿಂಗೆ ವಿಶ್ವಸಂಸ್ಥೆಯ ಪ್ರಶಸ್ತಿ

Update: 2018-10-14 17:09 GMT

ಹೊಸದಿಲ್ಲಿ, ಅ.14: ವಿನೂತನ ಕೃಷಿ ನೀತಿ ಜಾರಿಗೊಳಿಸಿ 66 ಸಾವಿರಕ್ಕೂ ಅಧಿಕ ರೈತರ ಬದುಕಿಗೆ ಹೊಸ ಭರವಸೆ ಮೂಡಿಸಿದ ಸಿಕ್ಕಿಂ ರಾಜ್ಯವು ವಿಶ್ವಸಂಸ್ಥೆಯು ಕೊಡಮಾಡುವ ಸಂಪೂರ್ಣ ಸಾವಯವ ರಾಜ್ಯ ಎಂಬ ಪ್ರತಿಷ್ಠಿತ ಪ್ರಶಸ್ತಿ ಪಡೆದಿದೆ.

ರಾಸಾಯನಿಕ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ನಿಲ್ಲಿಸಿ ಪ್ರಾಕೃತಿಕವಾಗಿ ದೊರಕುವ ಪರ್ಯಾಯ ಕ್ರಮಗಳನ್ನು ಅನುಷ್ಠಾನಗೊಳಿಸಿದ್ದ ಹಿನ್ನೆಲೆಯಲ್ಲಿ 2016ರಲ್ಲಿ ಸಿಕ್ಕಿಂ ರಾಜ್ಯವನ್ನು ದೇಶದ ಪ್ರಪ್ರಥಮ ಸಂಪೂರ್ಣ ಸಾವಯವ ರಾಜ್ಯ ಎಂದು ವಿಶ್ವಸಂಸ್ಥೆ ಪರಿಗಣಿಸಿದ್ದು ಶುಕ್ರವಾರ ಪುರಸ್ಕಾರ ಪ್ರದಾನ ಮಾಡಲಾಗಿದೆ. ಅಲ್ಲದೆ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರಮಾಣ 2014ರಿಂದ 2017ರವರೆಗಿನ ಅವಧಿಯಲ್ಲಿ ಶೇ.50ರಷ್ಟು ಅಧಿಕವಾಗಿದೆ ಎಂದು ‘ವರ್ಲ್ಡ್ ಫ್ಯೂಚರ್ ಕೌನ್ಸಿಲ್’ ತಿಳಿಸಿದೆ.

ಅರಣ್ಯನಾಶದ ವಿರುದ್ಧ ಹೋರಾಟ, ಮಹಿಳೆಯರು/ಹೆಣ್ಣುಮಕ್ಕಳ ವಿರುದ್ಧದ ಹಿಂಸೆಯ ವಿರುದ್ಧ ಹೋರಾಟ, ಸಮುದ್ರದ ನೀರು ಕಲುಷಿತಗೊಳಿಸುವ ವಿರುದ್ಧ ಹೋರಾಟ ಮುಂತಾದ ಕ್ಷೇತ್ರಗಳಲ್ಲಿ ಅನನ್ಯ ಸಾಧಕರನ್ನು ಈ ಹಿಂದೆ ವಿಶ್ವಸಂಸ್ಥೆ ಸನ್ಮಾನಿಸಿದ್ದು ಈ ಬಾರಿ ಕೃಷಿ ವಿಜ್ಞಾನ ಕ್ಷೇತ್ರ(ಗಿಡ ನೆಡುವುದು, ರಾಸಾಯನಿಕ ಬಳಕೆ ತ್ಯಜಿಸುವುದು)ವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದ್ವಿತೀಯ ಪ್ರಶಸ್ತಿಯನ್ನು ಮೂರು ದೇಶಗಳು ಹಂಚಿಕೊಂಡಿವೆ. ಕೃಷಿಕರ ಕುಟುಂಬದಿಂದ ಶಾಲಾ ಮಕ್ಕಳ ಮಧ್ಯಾಹ್ನದ ಊಟ ಯೋಜನೆಗೆ ಆಹಾರಧಾನ್ಯಗಳನ್ನು ನೇರವಾಗಿ ಖರೀದಿಸಿ ಕೃಷಿಗೆ ಪ್ರೋತ್ಸಾಹ ನೀಡುವ ಯೋಜನೆ ಜಾರಿಗೊಳಿಸಿರುವ ಬ್ರೆಝಿಲ್, ಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸಿ ಹೆಚ್ಚು ಸಾವಯವ ಆಹಾರ ಖರೀದಿಸಲು ಪ್ರೋತ್ಸಾಹಿಸುತ್ತಿರುವ ಡೆನ್ಮಾರ್ಕ್ ಹಾಗೂ ನಗರಪ್ರದೇಶದಲ್ಲಿ ತೋಟಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಇಕ್ವೆಡಾರ್‌ನ ರಾಜಧಾನಿ ಕ್ವಿಟೋ ದ್ವಿತೀಯ ಪ್ರಶಸ್ತಿ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News