ಕೃಷಿ ತ್ಯಾಜ್ಯ ದಹನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಐಎಂಎ

Update: 2018-10-14 17:11 GMT

ಹೊಸದಿಲ್ಲಿ, ಅ.14: ಕೃಷಿ ತ್ಯಾಜ್ಯವನ್ನು ಸುಟ್ಟಾಗ ಹೊರಬೀಳುವ ಹೊಗೆಯು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಆದ್ದರಿಂದ ಕೃಷಿ ತ್ಯಾಜ್ಯವನ್ನು ಸುಡುವ ಅವಧಿಯಲ್ಲಿ ಆ ಪ್ರದೇಶದ ಜನತೆ ಎನ್-95 ಮುಖವಾಡ ಧರಿಸಬೇಕು ಅಥವಾ ಸಾಧ್ಯವಾದಷ್ಟು ಮನೆಯೊಳಗೇ ಇರಬೇಕು ಎಂದು ಭಾರತೀಯ ವೈದ್ಯಕೀಯ ಸಂಘಟನೆ(ಐಎಂಎ) ಅಧ್ಯಕ್ಷ ರವಿ ವಾಂಖೇಡ್ಕರ್ ಸಲಹೆ ನೀಡಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕೃಷಿ ತ್ಯಾಜ್ಯ ಸುಡುವುದರಿಂದ ಬಿಡುಗಡೆಯಾಗುವ ಹೊಗೆಯಿಂದ ಟಿಬಿಯಂತಹ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚುತ್ತದೆ. ಇದೀಗ ಸುಗ್ಗಿಯ ಕಾಲ ಸನ್ನಿಹಿತವಾಗಿರುವುದರಿಂದ ಉತ್ತರ ಭಾರತದಲ್ಲಿ ವಾಯುಮಾಲಿನ್ಯ ಅಧಿಕಗೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಕಾರಣದಿಂದ ಜನತೆ ಆದಷ್ಟು ಮನೆಯೊಳಗೇ ಇರಬೇಕು. ಹೊರಹೋಗುವ ಸಂದರ್ಭ ಬಂದರೆ ಎನ್-95 ಮುಖವಾಡ ಧರಿಸಬೇಕು ಎಂದವರು ಹೇಳಿದರು. ಕೃಷಿ ತ್ಯಾಜ್ಯದ ದಹನದ ಮೇಲೆ ನಿರ್ಬಂಧ ವಿಧಿಸಲಾಗಿದ್ದರೂ ದಿಲ್ಲಿ ಹಾಗೂ ನೆರೆಯ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಮುಂದುವರಿದಿದ್ದು ವಾಯುಮಾಲಿನ್ಯದ ಅಪಾಯ ಹೆಚ್ಚಿದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಾ ಸಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News