ಶಾಲೆಯಲ್ಲಿ ಆಹಾರ ತಯಾರಿಸಲು ದಲಿತ ಮಹಿಳೆಯ ನೇಮಕ: ಮಕ್ಕಳ ಹೆತ್ತವರಿಂದ ಪ್ರತಿಭಟನೆ

Update: 2018-10-14 17:38 GMT
ಸಾಂದರ್ಭಿಕ ಚಿತ್ರ

ಕೊಯಂಬತ್ತೂರು,ಅ.14: ಶಾಲೆಯಲ್ಲಿ ಅಡುಗೆ ತಯಾರಿಸಲು ದಲಿತ ಮಹಿಳೆಯನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಶಾಲೆಯಲ್ಲಿ ಕಲಿಯುವ ಮಕ್ಕಳ ಹೆತ್ತವರ ಒಂದು ಗುಂಪು ಪ್ರತಿಭಟನೆ ನಡೆಸಿದ ಘಟನೆ ತಮಿಳು ನಾಡಿದ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಸೇಲಂ ಜಿಲ್ಲೆಯ ಕುಪ್ಪನ್‌ಕೊಟ್ಟೈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆ ಜ್ಯೋತಿಯನ್ನು ಅಡುಗೆ ತಯಾರಿಸಲು ನೇಮಕ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡ ಮಕ್ಕಳ ಹೆತ್ತವರ ಒಂದು ಗುಂಪು ಪ್ರತಿಭಟನೆ ನಡೆಸಿದ್ದು ಆಕೆ ತಯಾರಿಸಿದ ಆಹಾರವನ್ನು ತಮ್ಮ ಮಕ್ಕಳು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದರು. ಮಹಿಳೆಯನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಬೇಕು. ಇಲ್ಲವಾದಲ್ಲಿ ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸುವುದಾಗಿ ಹೆತ್ತವರು ಎಚ್ಚರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯರು ಈ ಕುರಿತು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ ನಂತರ ಸ್ಥಳಕ್ಕಾಗಮಿಸಿದ ಅಧಿಕಾರಿ ಪ್ರತಿಭಟನಾಕಾರರ ಮನವೊಲಿಸಿದರು ಮತ್ತು ಮಹಿಳೆ ತನ್ನ ಕೆಲಸದಲ್ಲಿ ಮುಂದುವರಿದಿದ್ದರು. ಆದರೆ ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಆರು ವ್ಯಕ್ತಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ರವಿವಾರ ಮೂವರನ್ನು ಬಂಧಿಸಿದ್ದಾರೆ ಮತ್ತು ಇತರ ಮೂವರ ಶೋಧಕಾರ್ಯ ನಡೆಯುತ್ತಿದೆ.

ಇದೇ ರೀತಿಯ ವಿವಾದವು ತಿರುಪುರ್‌ನ ಸರಕಾರಿ ಶಾಲೆಯಲ್ಲೂ ಸೃಷ್ಟಿಯಾಗಿದ್ದು ಅಲ್ಲಿ ದಲಿತ ಮಹಿಳೆಯನ್ನು ಅಡುಗೆಗೆ ನೇಮಿಸಿದ ಕಾರಣಕ್ಕೆ ಮೇಲ್ಜಾತಿಯ ಗುಂಪೊಂದು ಶಾಲೆಯ ವಿರುದ್ಧ ಪ್ರತಿಭಟನೆ ನಡೆಸಿತ್ತು. ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಮಧ್ಯ ಪ್ರವೇಶದ ನಂತರ ಈ ಪ್ರಕರಣ ಸುಖಾಂತ್ಯಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News