ಹಿಂದೂ ಅಲ್ಲ ಎಂಬ ಕಾರಣಕ್ಕೆ ಭಾರತೀಯ ವಿಜ್ಞಾನಿಗೆ ಅವಮಾನ: ಆರೋಪ

Update: 2018-10-15 06:29 GMT
ಡಾ. ಕರಣ್ ಜಾನಿ

ವಡೋದರ, ಅ. 15: "ನನ್ನ ಸರ್‌ನೇಮ್ ಹಿಂದೂಗಳ ಹೆಸರನ್ನು ಹೋಲುವುದಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಅಟ್ಲಾಂಟದಲ್ಲಿ ಗಾರ್ಬಾ ಸಭಾಗೃಹದಿಂದ ನನ್ನನ್ನು ಹಾಗೂ ಮೂವರು ಸ್ನೇಹಿತರನ್ನು ಹೊರಹಾಕಲಾಗಿದೆ" ಎಂದು ಅಮೆರಿಕದಲ್ಲಿ ನೆಲೆಸಿರುವ ವಡೋದರ ಮೂಲದ ಖ್ಯಾತ ಬಾಹ್ಯಾಕಾಶ ಭೌತ ವಿಜ್ಞಾನಿ ದೂರಿದ್ದಾರೆ.

ಗುರುತ್ವಾಕರ್ಷಣೆ ಅಲೆಗಳನ್ನು ಪತ್ತೆ ಮಾಡಿದ ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್ ವೇವ್ ಅಬ್ಸರ್ವೇಟರಿ (ಲಿಗೊ) ವಿಜ್ಞಾನಿಗಳ ತಂಡದಲ್ಲಿದ್ದ ಡಾ. ಕರಣ್ ಜಾನಿ (29) ಈ ಗಂಭೀರ ಆರೋಪ ಮಾಡಿದ್ದಾರೆ. "ಅಟ್ಲಾಂಟದ ಶ್ರೀ ಶಕ್ತಿ ಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದ ಸಂಘಟಕರು ಸಭಾಂಗಣ ದಿಂದ ನಮ್ಮನ್ನು ಹೊರಹಾಕಿದ್ದಾರೆ" ಎಂದು ಫೇಸ್‌ಬುಕ್ ಮತ್ತು ಟ್ವಿಟ್ಟರ್ ಮೂಲಕ ಆಪಾದಿಸಿದ್ದರೆ. ಆರು ವರ್ಷದಿಂದ ಈ ಮಂದಿರದಲ್ಲಿ ಜಾನಿ ಗಾರ್ಬಾ ನೃತ್ಯ ಮಾಡುತ್ತಾ ಬಂದಿದ್ದರೂ ಯಾವ ಸಮಸ್ಯೆಯೂ ಆಗಿರಲಿಲ್ಲ. ಗುಜರಾತಿ ಭಾಷೆಯಲ್ಲೇ ಸಂಘಟಕರ ಜತೆ ಮಾತನಾಡಿದರೂ, ಸೇರಿಸಿಕೊಳ್ಳಲು ನಿರಾಕರಿಸಿದರು ಎಂದು ದೂರಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೊ ತುಣುಕನ್ನೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ನೀವು ಹಿಂದೂಗಳಂತೆ ಕಾಣಿಸುತ್ತಿಲ್ಲ ಮತ್ತು ಗುರುತಿನ ಚೀಟಿಯಲ್ಲಿರುವ ಸರ್‌ನೇಮ್ ಹಿಂದೂಗಳ ಹೆಸರನ್ನು ಹೋಲುತ್ತಿಲ್ಲ ಎಂಬ ಕಾರಣದಿಂದ 2018ನೇ ವರ್ಷ ಮತ್ತು ಅಟ್ಲಾಂಟದ ಶ್ರೀಶಕ್ತಿ ಮಂದಿರ ನನಗೆ ಹಾಗೂ ನನ್ನ ಸ್ನೇಹಿತರಿಗೆ ಗಾರ್ಬಾ ನೃತ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿದೆ" ಎಂದು ವಿವರಿಸಿದ್ದಾರೆ.

ಸ್ನೇಹಿತರು ಸ್ವಯಂ ಸೇವಕರಿಗೆ ಗುರುತಿನ ಚೀಟಿ ನೀಡಿದರೂ, ಸರ್‌ನೇಮ್ "ವಾಲಾ" ಎಂಬುದಾಗಿ ಇರುವ ಕಾರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೊರಕ್ಕೆ ಕಳುಹಿಸಿದ್ದಾಗಿ ಹೇಳಿದ್ದಾರೆ.

"ನಾವು ನಿಮ್ಮ ಸಮಾರಂಭಕ್ಕೆ ಬರುವುದಿಲ್ಲ. ನಮ್ಮದಕ್ಕೆ ನಿಮಗೆ ಅವಕಾಶ ನೀಡುವುದಿಲ್ಲ" ಎಂದು ಸ್ವಯಂಸೇವಕರೊಬ್ಬರು ಸ್ನೇಹಿತನಿಗೆ ಕಟುವಾಗಿ ಹೇಳಿದರು. ನನ್ನ ಜತೆಗಿದ್ದ ಸ್ನೇಹಿತೆ ಕೊಂಕಣಿ ಸಮುದಾಯಕ್ಕೆ ಸೇರಿದ್ದು, ಮೊದಲ ಬಾರಿಗೆ ಗಾರ್ಬಾಗೆ ಆಗಮಿಸಿದ್ದರು. ಆಕೆಯ ಸರ್‌ನೇಮ್ ಮುರುಡೇಶ್ವರ ಎಂದಿದೆ. ಕನ್ನಡ- ಮರಾಠಿ ಸಮುದಾಯಕ್ಕೆ ಸೇರಿದವಳು ಎಂದು ಸ್ವಯಂಸೇವಕರಿಗೆ ಹೇಳಿದಾಗ, "ಏನು ಕನ್ನಡ, ನೀವು ಇಸ್ಮಾಯ್ಲಿ" ಎಂದು ಹೇಳಿದ್ದಾಗಿ ವಿವರ ನೀಡಿದ್ದಾರೆ. ಅಮೆರಿಕದಲ್ಲಿ ಕಳೆದ 12 ವರ್ಷದಿಂದ ವಾಸವಿದ್ದರೂ ಇಂಥ ಅವಮಾನ ಎದುರಿಸಿಲ್ಲ ಎಂದು ಜಾನಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News