ದ್ವಿಶತಕ ಸಿಡಿಸಿ ತಂದೆ-ಅಜ್ಜನ ಹಾದಿ ಅನುಸರಿಸಿದ ಪಾಕ್ ದಾಂಡಿಗ

Update: 2018-10-15 06:37 GMT

ಕರಾಚಿ, ಅ.15: ಪಾಕಿಸ್ತಾನ ಕ್ರಿಕೆಟಿಗ ಶೆಹ್ಝಾರ್ ಮುಹಮ್ಮದ್ ಕಳೆದ ವಾರ ನಡೆದ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ 265 ರನ್ ಗಳಿಸಿದರು. ಈ ಮೂಲಕ ತನ್ನ ಕುಟುಂಬದ ಶ್ರೀಮಂತ ಕ್ರಿಕೆಟ್ ಇತಿಹಾಸದಲ್ಲಿ ತಾನೂ ಸೇರ್ಪಡೆಗೊಂಡರು.

ದೇಶೀಯ ಕ್ರಿಕೆಟ್‌ನಲ್ಲಿ ಮುಹಮ್ಮದ್ ಅವರ ತಂದೆ, ಅಜ್ಜ ದ್ವಿಶತಕ ಸಿಡಿಸಿದ್ದರು. ಇದೀಗ ಮುಹಮ್ಮದ್ ಇವರೆಲ್ಲರ ಹೆಜ್ಜೆ ಅನುಸರಿಸಿ ಅಪೂರ್ವ ದಾಖಲೆ ನಿರ್ಮಿಸಿದ್ದಾರೆ.

 ಮುಹಮ್ಮದ್ ಪಾಕಿಸ್ತಾನ ಕ್ರಿಕೆಟ್ ಲೆಜೆಂಡ್ ಹನೀಫ್ ಮುಹಮ್ಮದ್ ಅವರ ಮೊಮ್ಮಗ. ಮುಹಮ್ಮದ್ ತಂದೆ ಶುಐಬ್ ಮುಹಮ್ಮದ್ ಪಾಕಿಸ್ತಾನದ ಪರ 45 ಟೆಸ್ಟ್ ಹಾಗೂ 63 ಏಕದಿನ ಪಂದ್ಯಗಳನ್ನು ಆಡಿದ್ದು ಪ್ರಥಮ ಕ್ರಿಕೆಟ್‌ನಲ್ಲಿ ಗರಿಷ್ಠ 208 ರನ್ ಗಳಿಸಿದ್ದರು.

ಕಳೆದ ವಾರ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಲ್ತಾನ್ ವಿರುದ್ಧ ಕರಾಚಿ ವೈಟ್ಸ್ ತಂಡದ ಪರ ಆಡಿದ ಮುಹಮ್ಮದ್ 464 ಎಸೆತಗಳನ್ನು ಎದುರಿಸಿ, 30 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 265 ರನ್ ಗಳಿಸಿದ್ದರು. ತನ್ನ 36ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಮುಹಮ್ಮದ್ ಸಿಡಿಸಿದ ದ್ವಿಶತಕದ ನೆರವಿನಿಂದ ಕರಾಚಿ ವೈಟ್ಸ್ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 600 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

 ‘‘ಮುಹಮ್ಮದ್ ಕುಟುಂಬಕ್ಕೆ ಇದೊಂದು ಶ್ರೇಷ್ಠ ಕ್ಷಣ. ಈ ಸಾಧನೆ ಕ್ರಿಕೆಟ್ ನಮ್ಮ ರಕ್ತದಲ್ಲೆ ಹರಿಯುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಒಂದು ವೇಳೆ ಹನೀಫ್ ಸಾಹೇಬ್ ಈಗ ಜೀವಂತವಾಗಿರುತ್ತಿದ್ದರೆ ಮೊಮ್ಮಗನ ಸಾಧನೆ ನೋಡಿ ತುಂಬಾ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು’’ ಎಂದು ಶೆಹ್ಝಾರ್ ತಂದೆ ಶುಐಬ್ ಮುಹಮ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News