ದಸರಾದಲ್ಲಿ ರಾವಣ ದಹನ ನಿಷೇಧಕ್ಕೆ ಭೀಮ್ ಸೇನೆ ಆಗ್ರಹ

Update: 2018-10-15 13:16 GMT

ಮುಂಬೈ, ಅ.15: ಈ ಬಾರಿಯ ದಸರಾ ಆಚರಣೆಯ ಸಂದರ್ಭ ರಾವಣ ದಹನವನ್ನು ನಿಷೇಧಿಸಬೇಕೆಂದು ಆಗ್ರಹಿಸಿರುವ ಭೀಮ್ ಸೇನೆ , ಈ ಬಗ್ಗೆ ಸರಕಾರ ಹಾಗೂ ಪೊಲೀಸರಿಗೆ ಮನವಿಪತ್ರ ನೀಡಲಾಗುವುದು ಎಂದು ತಿಳಿಸಿದೆ.

ರಾವಣ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಯಾಗಿದ್ದು, ವಿವೇಕಶೀಲ ಜನಪ್ರಿಯ ದೊರೆಯಾಗಿದ್ದಾನೆ. ಹಲವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಅಭಿರುಚಿ ಇದ್ದ ರಾವಣನನ್ನು ನಮ್ಮ ಧರ್ಮಗ್ರಂಥಗಳಲ್ಲಿ ಖಳನಾಯಕನಂತೆ ಚಿತ್ರಿಸಲಾಗಿದೆ. ಕೆಲವು ಬುಡಕಟ್ಟಿನ ಜನರು ರಾವಣನನ್ನು ದೇವರೆಂದು ಪೂಜಿಸುತ್ತಾರೆ. ಈ ಹಿನ್ನೆಲೆಯಲ್ಲಿ ದಸರಾ ಆಚರಣೆ ಸಂದರ್ಭ ರಾವಣನ ಪ್ರತಿಕೃತಿ ದಹಿಸುವುದನ್ನು ನಿಷೇಧಿಸಬೇಕು ಎಂದು ಭೀಮ್ ಸೇನೆಯ ಮಹಾರಾಷ್ಟ್ರ ವಿಭಾಗದ ಮುಖಂಡ ಅಶೋಕ್ ಕಾಂಬ್ಳೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಾರತದಲ್ಲಿ ರಾವಣನನ್ನು ಪೂಜಿಸುವ ಹಲವು ಮಂದಿರಗಳಿದ್ದು, ತಮಿಳುನಾಡಿನಲ್ಲೇ 350ಕ್ಕೂ ಹೆಚ್ಚು ರಾವಣನ ದೇವಸ್ಥಾನಗಳಿವೆ. ಮಧ್ಯಪ್ರದೇಶದ ಮಂದಸೌರ್‌ನಲ್ಲಿರುವ ದೇವಸ್ಥಾನ 15 ಅಡಿಗೂ ಹೆಚ್ಚು ಎತ್ತರವಿದೆ. ರಾವಣನನ್ನೂ ದೇಶದಾದ್ಯಂತ ಆರಾಧಿಸುತ್ತಾರೆ ಎಂಬುದರ ದ್ಯೋತಕ ಇದಾಗಿದೆ. ನಮ್ಮ ಗ್ರಂಥಗಳಲ್ಲಿ ರಾವಣನನ್ನು ಬ್ರಾಹ್ಮಣ ಎಂದು ಚಿತ್ರಿಸಲಾಗಿದೆ. ಅಂದಿನ ದಿನಗಳಲ್ಲಿ ವ್ಯಕ್ತಿಗಿರುವ ಜ್ಞಾನಭಂಡಾರವನ್ನು ಉಲ್ಲೇಖಿಸುವ ಪದ ಇದಾಗಿದೆ ಎಂದು ಕಾಂಬ್ಳೆ ಹೇಳಿದ್ದಾರೆ.

 ಸಮಾಜದಲ್ಲಿ ಹಲವು ಸಾಮಾಜಿಕ ಅನಿಷ್ಟಗಳನ್ನು ನಿಷೇಧಿಸಿರುವಂತೆಯೇ ರಾವಣ ದಹನ ಎಂಬ ಸಾಮಾಜಿಕ ಅನಿಷ್ಟವನ್ನೂ ನಿಷೇಧಿಸಬೇಕು . ಅಲ್ಲದೆ ರಾವಣ ಪ್ರತಿಕೃತಿ ದಹಿಸುವವರ ವಿರುದ್ಧ ಸಮುದಾಯದ ಭಾವನೆಗಳಿಗೆ ಘಾಸಿ ಎಸಗಿದ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ ಅಪರಾಧಕ್ಕಾಗಿ ಐಪಿಸಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News