ಬಿಲ್ ಕ್ಲಿಂಟನ್ ಅಧಿಕಾರ ದುರುಪಯೋಗ ಮಾಡಿಲ್ಲ

Update: 2018-10-15 16:49 GMT

ವಾಶಿಂಗ್ಟನ್, ಅ. 15: “ನನ್ನ ಗಂಡ ಬಿಲ್ ಕ್ಲಿಂಟನ್ ಶ್ವೇತಭವನದ ಮಾಜಿ ಕಲಿಕಾ ಸಿಬ್ಬಂದಿ (ಇನ್‌ಟರ್ನ್) ಮೋನಿಕಾ ಲೆವಿನ್‌ಸ್ಕಿ ಜೊತೆ ಹೊಂದಿದ್ದ ಸಂಬಂಧ ಅಧಿಕಾರ ದುರುಪಯೋಗವಲ್ಲ ಹಾಗೂ ಅದಕ್ಕಾಗಿ ಅವರು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕಾಗಿರಲಿಲ್ಲ” ಎಂದು ಡೆಮಾಕ್ರಟಿಕ್ ಪಕ್ಷದ ನಾಯಕಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

ಎರಡು ದಶಕಗಳ ಹಳೆಯ ಹಗರಣವು ಈಗ ‘ಮೀ-ಟೂ’ ಕಾಲದಲ್ಲಿ ಮತ್ತೆ ಚಾಲ್ತಿಗೆ ಬಂದಿದೆ. ಹಾಲಿ ಅಧ್ಯಕ್ಷ ಮತ್ತು ಓರ್ವ ಕಲಿಕಾ ಸಿಬ್ಬಂದಿ ನಡುವಿನ ಅಧಿಕಾರ ಅಸಮತೋಲನವನ್ನು ಗಮನಿಸಿದರೆ ಅವರ ನಡುವಿನ ಸಂಬಂಧವನ್ನು ಪರಸ್ಪರ ಒಪ್ಪಿಗೆಯ ಸಂಬಂಧ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಟೀಕಾಕಾರರು ಹೇಳುತ್ತಾರೆ.

ಈ ಸಂಬಂಧದ ಬಗ್ಗೆ ಸುಳ್ಳು ಹೇಳಿರುವುದಕ್ಕಾಗಿ 1998ರಲ್ಲಿ ರಿಪಬ್ಲಿಕನ್ ನಿಯಂತ್ರಣದ ಸೆನೆಟ್‌ನಲ್ಲಿ ಕ್ಲಿಂಟನ್‌ಗೆ ವಾಗ್ದಂಡನೆ ವಿಧಿಸಿದ ಬಳಿಕ ಅವರು ರಾಜೀನಾಮೆ ನೀಡಬೇಕಾಗಿತ್ತು ಎಂದು ನ್ಯೂಯಾರ್ಕ್ ಸೆನೆಟರ್ ಕರ್ಸ್ಟನ್ ಗಿಲಿಬ್ರಾಂಡ್ ಹೇಳುತ್ತಾರೆ.

ಅವರ ಸಂಬಂಧವು ಅಧಿಕಾರ ದುರುಪಯೋಗವಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಿಲರಿ, ‘‘ಇಲ್ಲ, ಇಲ್ಲ, ಆಗ 22 ವರ್ಷದ ಲೆವಿನ್‌ಸ್ಕಿ ವಯಸ್ಕರಾಗಿದ್ದರು’’ ಎಂದರು.

ಸಿಬಿಎಸ್ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News