ಅಧಿಕಾರಕ್ಕೆ ಬಂದ ಮೇಲೆ ಮೋದಿಗೆ ಗಂಗಾಮಾತೆಯ ನೆನಪೇ ಆಗಿಲ್ಲ: ಅಗರ್‌ವಾಲ್ ಸಮುದಾಯದ ಆಕ್ರೋಶ

Update: 2018-10-15 17:41 GMT

ಮುಂಬೈ, ಅ.15: ಗಂಗಾ ನದಿ ನೀರು ಸ್ವಚ್ಛಗೊಳಿಸುವ ತನ್ನ ಭರವಸೆಯನ್ನು ಕಳೆದ ನಾಲ್ಕು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಈಡೇರಿಸದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಸ್ವಚ್ಛ ಗಂಗಾ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಇರಾದೆಯಲ್ಲಿದೆ ಎಂದು ಅಗರವಾಲ್ ಸಮುದಾಯ ಟೀಕಿಸಿದೆ.

ಈ ಕುರಿತು ಅಖಿಲ ಭಾರತೀಯ ಅಗರವಾಲ್ ಸಮ್ಮೇಳನ(ಎಬಿಎಎಸ್)ದ ರಾಷ್ಟ್ರೀಯ ಕಾರ್ಯದರ್ಶಿ ಸುಮನ್ ಆರ್. ಅಗರ್‌ವಾಲ್ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ, ಗಂಗಾ ನದಿ ನೀರನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ 111 ದಿನಗಳಿಂದ ಉಪವಾಸ ನಡೆಸಿದ್ದ ಪರಿಸರವಾದಿ ಜಿ.ಡಿ.ಅಗರ್‌ವಾಲ್ ಅಕ್ಟೋಬರ್ 9ರಂದು ನಿಧನರಾಗಿರುವುದನ್ನು ಉಲ್ಲೇಖಿಸಿದ್ದಾರೆ. ತಮ್ಮ ಉಪವಾಸದ ಅವಧಿಯಲ್ಲಿ ಅಗರ್‌ವಾಲ್ ಪ್ರಧಾನಿಗೆ ಮೂರು ಪತ್ರಗಳನ್ನು ಬರೆದಿದ್ದರು. ಈ ಪತ್ರ ಉತ್ತರಿಸಲು ಯೋಗ್ಯವಲ್ಲ ಎಂದು ಸರಕಾರ ಭಾವಿಸಿ ಸುಮ್ಮನಾಗಿತ್ತು. ಆದರೆ ಅಗರ್‌ವಾಲ್ ನಿಧನರಾದ ಬಳಿಕ ಪ್ರಧಾನಿ, ಸರಕಾರ ಹಾಗೂ ಇತರ ಸಚಿವರು ಅಗರ್‌ವಾಲ್ ಪರಿಸರಕ್ಕೆ ನೀಡಿದ ಮಹಾನ್ ಕೊಡುಗೆ ಸದಾ ಸ್ಮರಣೀಯ ಎಂದು ಟ್ವೀಟ್ ಮಾಡಿದ್ದರು . ಇದು ಮೋದಿ ಸರಕಾರದ ದ್ವಿಮುಖ ಧೋರಣೆ ಹಾಗೂ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಸುಮನ್ ಆರ್. ಅಗರ್‌ವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2014ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಗಂಗಾಮಾತೆಯ ಸ್ವಘೋಷಿತ ಪುತ್ರ(ನರೇಂದ್ರ ಮೋದಿ)ನಿಗೆ ಗಂಗಾಮಾತೆಯ ನೆನಪಾಗಲಿಲ್ಲ. ಆದರೆ 2017ರ ಉತ್ತರಪ್ರದೇಶ ಚುನಾವಣೆಯ ಸಂದರ್ಭ ಗಂಗಾಮಾತೆ ನೆನಪಾದಳು ಎಂದು ಸುಮನ್ ಅಗರ್‌ವಾಲ್ ಟೀಕಿಸಿದ್ದಾರೆ.

‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಎನ್ನುವ ನಿಮ್ಮ ಚುನಾವಣಾ ಘೋಷಣೆ ಕೇವಲ ಭರವಸೆ ಮಾತ್ರವೇ. ಅಗರ್‌ವಾಲ್ ಸಮುದಾಯವನ್ನು ಯಾಕೆ ನಿರಂತರವಾಗಿ ನಿರ್ಲಕ್ಷಿಸಲಾಗುತ್ತಿದೆ. ಗಂಗಾ ಸ್ವಚ್ಛತೆಗೆ ಆಗ್ರಹಿಸಿ ಉಪವಾಸ ನಿರತರಾಗಿದ್ದ ಸಂದರ್ಭ ಮೃತಪಟ್ಟ ಜಿ.ಡಿ.ಅಗರ್‌ವಾಲ್‌ರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವದೊಂದಿಗೆ ನಡೆಸಲಾಗುವುದೆಂದು ನಿರೀಕ್ಷಿಸಿದ್ದೆವು. ಆದರೆ ನಿರೀಕ್ಷೆ ಹುಸಿಯಾಗಿದೆ ಎಂದಿರುವ ಸುಮನ್ ಅಗರ್‌ವಾಲ್, ಇದೀಗ ಅವರ ಸಾವಿನಿಂದ 10 ಕೋಟಿ ಜನಸಂಖ್ಯೆಯುಳ್ಳ ಅಗರ್‌ವಾಲ್ ಸಮುದಾಯದಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ. ಈ ಸಮುದಾಯದ ಜನರ ಭಾವನೆ ಮತ್ತು ಆಕ್ರೋಶ 2019ರ ಚುನಾವಣೆಯಲ್ಲಿ ವ್ಯಕ್ತವಾಗಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News