ವಿನಿತಾ ನಂದಾ ವಿರುದ್ಧ ಅಲೋಕ್ ನಾಥ್‌ರಿಂದ ಮಾನನಷ್ಟ ಮೊಕದ್ದಮೆ ದಾಖಲು

Update: 2018-10-15 17:43 GMT

ಹೊಸದಿಲ್ಲಿ, ಅ. 15: ‘ಮೀ ಟೂ’ ಚಳವಳಿಯಲ್ಲಿ ಲೇಖಕಿ ಹಾಗೂ ನಿರ್ಮಾಪಕಿ ವಿನಿತಾ ನಂದಾ ಅವರಿಂದ ಅತ್ಯಾಚಾರ ಆರೋಪಕ್ಕೆ ಒಳಗಾದ ನಟ ಅಲೋಕ್ ನಾಥ್ ಅವರು ನಂದಾ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಪತ್ನಿ ಆಶು ನಾಥ್ ಅವರೊಂದಿಗೆ ಜಂಟಿಯಾಗಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಅಲೋಕ್ ನಾಥ್, ಲಿಖಿತ ಕ್ಷಮೆ ಕೋರುವಂತೆ ಹಾಗೂ 1 ರೂ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಅಲೋಕ್ ನಾಥ್ 19 ವರ್ಷಗಳ ಹಿಂದೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ವಿನಿತಾ ನಂದಾ ಆರೋಪಿಸಿದ್ದರು. ಅವರ ಆರೋಪದ ಬಳಿಕ ಅಲೋಕ್‌ನಾಥ್ ವಿರುದ್ಧ ಸಂಧ್ಯಾ ಮೃದುಲಾ ಹಾಗೂ ದೀಪಿಕಾ ಅಮೀನ್ ಲೈಂಗಿಕ ಕಿರುಕುಳ, ಅನುಚಿತ ವರ್ತನೆಯ ಆರೋಪ ಮಾಡಿದ್ದರು.

ವಿನಿತಾ ನಂದಾ ಅವರ ಸಾಮಾಜಿಕ ಜಾಲತಾಣದ ಪೊಸ್ಟ್ ಹಿನ್ನೆಲೆಯಲ್ಲಿ ಸಿನಿ ಹಾಗೂ ಟಿ.ವಿ. ಕಲಾವಿದರ ಸಂಘಟನೆ ಅಲೋಕ್ ನಾಥ್ ಅವರಿಗೆ ಶೋಕಾಸ್ ನೋಟಿಸು ಜಾರಿ ಮಾಡಿತ್ತು. ‘ನಿಮ್ಮನ್ನು ಯಾಕೆ ಉಚ್ಛಾಟನೆ ಮಾಡಬಾರದು’ ಎಂದು ಸಂಘಟನೆ ಪ್ರಶ್ನಿಸಿತ್ತು. ಇದಕ್ಕೆ ಅಲೋಕ್‌ನಾಥ್, ಅಪರಾಧ ಸಾಬೀತಾಗುವ ವರೆಗೆ ತಾನು ನಿರಪರಾಧಿ ಎಂದು ಸ್ಪಷ್ಟನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News