ಜಾರ್ಖಂಡ್, ಹೆದರಾಬಾದ್ ಸೆಮಿ ಫೈನಲ್‌ಗೆ

Update: 2018-10-15 18:45 GMT

ಬೆಂಗಳೂರು, ಅ.15: ಜಾರ್ಖಂಡ್ ಹಾಗೂ ಹೈದರಾಬಾದ್ ತಂಡಗಳು ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿವೆ.

ಸೋಮವಾರ ಇಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅನುಕೂಲ್ ರಾಯ್ ಅವರ 4 ವಿಕೆಟ್ ಗೊಂಚಲು ನೆರವಿನಿಂದ ಜಾರ್ಖಂಡ್ ತಂಡ ಮಹಾರಾಷ್ಟ್ರವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು.

ವೇಗಿದ್ವಯರಾದ ರಾಹುಲ್ ಶುಕ್ಲಾ(3-35) ಹಾಗೂ ವರುಣ್ ಆ್ಯರೊನ್(2-47)ಮಹಾರಾಷ್ಟ್ರ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ರಾಯ್(4-32)ಮಧ್ಯಮ ಹಾಗೂ ಕೆಳ ಕ್ರಮಾಂಕದ ದಾಂಡಿಗರಿಗೆ ಸವಾಲಾದರು. ರಾಯ್ ಅವರ ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ಜಾರ್ಖಂಡ್ ತಂಡ ಮಹಾರಾಷ್ಟ್ರವನ್ನು 42.2 ಓವರ್‌ಗಳಲ್ಲಿ 181 ರನ್‌ಗೆನಿಯಂತ್ರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಮಹಾರಾಷ್ಟ್ರ ತಂಡ ಒಂದು ಹಂತದಲ್ಲಿ 72 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ರೋಹಿತ್ ಮೊಟ್ವಾನಿ(52) ಹಾಗೂ ನಾಯಕ ರಾಹುಲ್ ತ್ರಿಪಾಠಿ(47)ತಂಡವನ್ನು ಆಧರಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದ ಜಾರ್ಖಂಡ್‌ಗೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಆಗ ಎರಡು ಬಾರಿ ಗುರಿಯನ್ನು ಪರಿಷ್ಕೃರಿಸಲಾಯಿತು. ಮೊದಲಿಗೆ 47 ಓವರ್‌ಗಳಲ್ಲಿ 174 ರನ್, ಆ ಬಳಿಕ 34 ಓವರ್‌ಗಳಲ್ಲಿ 127 ರನ್ ಗುರಿ ನೀಡಲಾಯಿತು.

ಎರಡನೇ ಬಾರಿ ಗುರಿ ಪರಿಷ್ಕೃರಿಸಿದಾಗ ಜಾರ್ಖಂಡ್ 27 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಶಶೀಮ್ ರಾಥೋರ್(ಔಟಾಗದೆ 53,81 ಎಸೆತ) ಹಾಗೂ ಸೌರಭ್ ತಿವಾರಿ(ಔಟಾಗದೆ 29,33 ಎಸೆತ)ಇನ್ನೂ 10 ಎಸೆತ ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಜಾರ್ಖಂಡ್ ಅ.18 ರಂದು ನಡೆಯುವ ಎರಡನೇ ಸೆಮಿ ಫೈನಲ್‌ನಲ್ಲಿ ದಿಲ್ಲಿ ತಂಡವನ್ನು ಮುಖಾಮುಖಿಯಾಗಲಿದೆ.

<\'20ಹೈದರಾಬಾದ್‌ಗೆ ರೋಚಕ ಜಯ

ಮತ್ತೊಂದು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಹೈದರಾಬಾದ್ ತಂಡ ಆಂಧ್ರ ತಂಡವನ್ನು 14 ರನ್‌ಗಳಿಂದ ರೋಚಕವಾಗಿ ಮಣಿಸಿ ಸೆಮಿ ಫೈನಲ್‌ಗೆ ತಲುಪಿತು.

ಹೈದರಾಬಾದ್ ತಂಡ ಬವಾಂಕ ಸಂದೀಪ್ ಅರ್ಧಶತಕದ ನೆರವಿನಿಂದ(96 ರನ್, 97 ಎಸೆತ)ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 281 ರನ್ ಗಳಿಸಿತು.

ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದ ಆಂಧ್ರ ತಂಡ ನಾಯಕ ಹನುಮ ವಿಹಾರಿ ಅರ್ಧಶತಕದ (95, 99 ಎಸೆತ, 8 ಬೌಂಡರಿ, 4 ಸಿಕ್ಸರ್) ಸಹಾಯದಿಂದ ಕೊನೆಯ ತನಕ ಹೋರಾಟ ನೀಡಿದ್ದು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 267 ರನ್ ಗಳಿಸಿತು.

ವಿಹಾರಿ ಅವರು ರಿಕಿ ಭುಯ್ ಅವರೊಂದಿಗೆ 3ನೇ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿದರು. ಆಂಧ್ರ 39ನೇ ಓವರ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತ್ತು. ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, ಮುಹಮ್ಮದ್ ಸಿರಾಜ್ ಆಂಧ್ರದ ಗೆಲುವಿನ ಆಸೆಗೆ ತಣ್ಣೀರೆರಚಿದರು. ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರೂ ಆಡುವ ಬಳಗವನ್ನು ಸೇರದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ವಿಜಯ್ ಹಝಾರೆ ಟ್ರೋಫಿಯಲ್ಲಿ ಹೈದರಾಬಾದ್ ತಂಡ ವನ್ನು ಪ್ರತಿನಿಧಿಸಿದ್ದು 50 ರನ್‌ಗೆ ಮೂರು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಸಿರಾಜ್‌ಗೆ ಸಾಥ್ ನೀಡಿದ ರವಿ ಕಿರಣ್(2-60)ಎರಡು ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ ಆರಂಭಿಕ ಆಟಗಾರರಾದ ತನ್ಮಯ್ ಅಗರ್ವಾಲ್(31) ಹಾಗೂ ಅಕ್ಷತ್ ರೆಡ್ಡಿ(18)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ತಂಡಕ್ಕೆ ಆಸರೆಯಾದ ಸಂದೀಪ್ 97 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ಗಳನ್ನೊಳಗೊಂಡ 96 ರನ್ ಗಳಿಸಿದರು. ನಾಯಕ ಅಂಬಟಿ ರಾಯುಡು(28)ಸಂದೀಪ್‌ಗೆ ಸಾಥ್ ನೀಡಿದರು.

ಸಂದೀಪ್ ಕೊನೆಯ ಓವರ್‌ನಲ್ಲಿ ಶ್ರೀಕರ ಭರತ್‌ಗೆವಿಕೆಟ್ ಒಪ್ಪಿಸಿದರು. ಹೈದರಾಬಾದ್ ಬುಧವಾರ ನಡೆಯಲಿರುವ ಮೊದಲ ಸೆಮಿ ಫೈನಲ್‌ನಲ್ಲಿ ಮುಂಬೈ ತಂಡದ ಸವಾಲು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News