ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ

Update: 2018-10-15 18:51 GMT

ದುಬೈ, ಅ.15: ಭಾರತ ನಾಯಕ ವಿರಾಟ್ ಕೊಹ್ಲಿ ಸೋಮವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ರವಿವಾರ ಕೊನೆಗೊಂಡ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಹಾಗೂ ರಿಷಭ್ ಪಂತ್ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ಈ ವರ್ಷ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪ್ರಶಸ್ತಿ ಜಯಿಸಲು ನೇತೃತ್ವವಹಿಸಿದ್ದ ಶಾ ಹೈದರಾಬಾದ್ ಟೆಸ್ಟ್‌ನಲ್ಲಿ ತನ್ನ ಸ್ಮರಣೀಯ ಚೊಚ್ಚಲ ಟೆಸ್ಟ್ ಸರಣಿಯನ್ನು ಪೂರ್ಣಗೊಳಿಸಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ 70 ಹಾಗೂ ಔಟಾಗದೆ 33 ರನ್ ಗಳಿಸಿದ್ದ ಶಾ 13 ಸ್ಥಾನ ಭಡ್ತಿ ಪಡೆದು 60ನೇ ಸ್ಥಾನ ತಲುಪಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ಶತಕ ದಾಖಲಿಸಿದ ಬಳಿಕ ಶಾ 73ನೇ ಸ್ಥಾನದೊಂದಿಗೆ ಐಸಿಸಿ ರ್ಯಾಂಕಿಂಗ್‌ಗೆ ಪ್ರವೇಶಿಸಿದ್ದರು.

ವಿಕೆಟ್‌ಕೀಪರ್-ದಾಂಡಿಗ ಪಂತ್ ಎರಡನೇ ಟೆಸ್ಟ್ ನಲ್ಲಿ 92 ರನ್ ಗಳಿಸುವುದರೊಂದಿಗೆ 23 ಸ್ಥಾನ ಭಡ್ತಿ ಪಡೆದು 62ನೇ ಸ್ಥಾನಕ್ಕೇರಿದ್ದಾರೆ.

  ದಿಲ್ಲಿ ದಾಂಡಿಗ ಪಂತ್ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು 111ನೇ ರ್ಯಾಂಕಿನಲ್ಲಿದ್ದರು. ರಾಜ್‌ಕೋಟ್‌ನಲ್ಲಿ 92 ರನ್ ಗಳಿಸಿದ್ದ ಪಂತ್ ಹೈದರಾಬಾದ್‌ನಲ್ಲೂ 92 ರನ್‌ಗೆ ಔಟಾಗಿ ಸತತ ಎರಡನೇ ಬಾರಿ ಶತಕ ವಂಚಿತರಾಗಿದ್ದರು. ಆದರೆ, ಅವರು ಐಸಿಸಿ ರ್ಯಾಂಕಿಂಗ್‌ನಲ್ಲಿ ತೃಪ್ತಿದಾಯಕ ಸಾಧನೆ ಮಾಡಿದ್ದಾರೆ. ಅಜಿಂಕ್ಯ ರಹಾನೆ ಎರಡನೇ ಟೆಸ್ಟ್‌ನಲ್ಲಿ 80 ರನ್ ಗಳಿಸಿದ ಹಿನ್ನೆಲೆಯಲ್ಲಿ 4 ಸ್ಥಾನ ಭಡ್ತಿ ಪಡೆದು 18ನೇ ಸ್ಥಾನಕ್ಕೇರಿದ್ದಾರೆ. ತವರು ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಗೊಂಚಲು ಪಡೆದ ಭಾರತದ ಮೂರನೇ ವೇಗದ ಬೌಲರ್ ಎನಿಸಿಕೊಂಡಿರುವ ಉಮೇಶ್ ಯಾದವ್ ನಾಲ್ಕು ಸ್ಥಾನ ಭಡ್ತಿ ಪಡೆದು 25ನೇ ಸ್ಥಾನ ತಲುಪಿದ್ದಾರೆ. ವೆಸ್ಟ್‌ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಬ್ಯಾಟ್ಸ್‌ಮನ್, ಬೌಲರ್ ಹಾಗೂ ಆಲ್‌ರೌಂಡರ್‌ಗಳ ರ್ಯಾಂಕಿಂಗ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಭಾರತ ವಿರುದ್ಧ 2ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 56 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿರುವ ಹೋಲ್ಡರ್ ನಾಲ್ಕು ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 9ನೇ ರ್ಯಾಂಕಿಗೆ ತಲುಪಿದ್ದಾರೆ.

ವಿಂಡೀಸ್ ಪರ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಹೋಲ್ಡರ್ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ 53ನೇ ಸ್ಥಾನಕ್ಕೇರಿದ್ದಾರೆ.

ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕದ ವೆರ್ನಾನ್ ಫಿಲ್ಯಾಂಡರ್‌ರನ್ನು ಹಿಂದಿಕ್ಕಿದ ಹೋಲ್ಡರ್ ಮೂರನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಪ್ರವಾಸಿ ತಂಡದ ಇನ್ನೋರ್ವ ಆಟಗಾರ ರೋಸ್ಟನ್ ಚೇಸ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಕಾರಣ 31ನೇ ಸ್ಥಾನಕ್ಕೇರಿದ್ದಾರೆ. ಶಾಯ್ ಹೋಪ್ 5 ಸ್ಥಾನ ಭಡ್ತಿ ಪಡೆದು 35ನೇ ರ್ಯಾಂಕಿಗೆ ತಲುಪಿದ್ದಾರೆ.

ವಿಂಡೀಸ್ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿರುವ ನಂ.1 ರ್ಯಾಂಕಿನ ಭಾರತ ಒಂದು ಪಾಯಿಂಟ್ ಗಳಿಸಿದೆ. ಒಂದು ಅಂಕ ಕಳೆದುಕೊಂಡಿರುವ ವೆಸ್ಟ್‌ಇಂಡೀಸ್‌ನ ಟೀಮ್ ರ್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News