ಶಬರಿಮಲೆ ಯಾತ್ರೆ: ಮಹಿಳೆಯರನ್ನು ತಡೆಯುತ್ತಿರುವ ಪ್ರತಿಭಟನಾಕಾರರು

Update: 2018-10-16 14:29 GMT

ತಿರುವನಂತಪುರಂ,ಅ.16: ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ತಿಂಗಳ ಪೂಜೆಗೆ ಬುಧವಾರ (ಇಂದು) ತೆರೆಯಲಾಗುತ್ತಿದ್ದು ಈ ವೇಳೆ ಭಕ್ತರು ಭೇಟಿ ನೀಡುವುದು ವಾಡಿಕೆ. ಆದರೆ ಈ ಬಾರಿ ಋತುಮತಿಯಾಗುವ ವಯಸ್ಸಿನ ಮಹಿಳಾ ಭಕ್ತರೂ ಶಬರಿಮಲೆ ಯಾತ್ರೆ ಕೈಗೊಳ್ಳಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಅಯ್ಯಪ್ಪ ದೇಗುಲಕ್ಕೆ ಯಾತ್ರೆ ಕೈಗೊಂಡ ಮಹಿಳೆಯರನ್ನು ಪ್ರತಿಭಟನಾಕಾರರು ತಡೆದಿರುವುದು ಉದ್ವಿಗ್ನತೆಗೆ ಕಾರಣವಾಗಿದೆ.

ಶಬರಿಮಲೆಯ ಮುಖ್ಯ ದ್ವಾರವಾಗಿರುವ ನೀಲಕಲ್‌ನಲ್ಲಿ ವಾಹನಗಳನ್ನು ತಡೆದ ಪ್ರತಿಭಟನಾಕಾರರು ಅವುಗಳೊಳಗೆ ಮಹಿಳಾ ಭಕ್ತರು ಇದ್ದಾರೆಯೇ ಎಂದು ಪರಿಶೀಲಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಮಹಿಳೆಯರೇ ಹೆಚ್ಚಾಗಿದ್ದ ಪ್ರತಿಭಟನಾಕಾರರ ಗುಂಪು ನೀಲಕಲ್‌ನಲ್ಲಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿರುವುದು ಕಂಡು ಬಂದಿದೆ. ಸಣ್ಣ ವಾಹನಗಳ ಜೊತೆಗೆ ಪ್ರತಿಭಟನಾಕಾರರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗಳಲ್ಲೂ ತಪಾಸಣೆ ನಡೆಸಿದ್ದು ಅದರೊಳಗಿದ್ದ ಯುವಮಹಿಳಾ ಭಕ್ತೆಯರನ್ನು ಕೆಳಗಿಳಿಯುವಂತೆ ಸೂಚಿಸುತ್ತಿರುವುದು ಕಂಡು ಬಂದಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

 ಈ ವರ್ಷ ಮಲಯಾಳಂ ತಿಂಗಳ ತುಲಾ ಮಾಸದ ಐದು ದಿನಗಳ ಕಾಲ ತಿಂಗಳ ಪೂಜೆಗೆ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲವನ್ನು ಅಕ್ಟೋಬರ್ 17ರಂದು ತೆರೆಯಲಾಗುತ್ತಿದ್ದು ಅ. 22ರಂದು ಮತ್ತೆ ಮುಚ್ಚಲ್ಪಡುತ್ತದೆ. ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಕಾಲೇಜು ವಿದ್ಯಾರ್ಥಿಗಳನ್ನೂ ಪ್ರತಿಭಟನಾಕಾರರು ಬಸ್ಸಿನಿಂದ ಇಳಿಸಿದ್ದಾರೆ. ತಮ್ಮ ಸುದ್ದಿ ಸಂಸ್ಥೆಗೆ ವರದಿಯನ್ನು ದಾಖಲಿಸಲು ಶಬರಿಮಲೆ ದೇಗುಲದತ್ತ ಪ್ರಯಾಣಿಸುತ್ತಿದ್ದ ಮಹಿಳಾ ಪತ್ರಕರ್ತೆಯರನ್ನೂ ತಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಭಕ್ತರು ಶಬರಿಮಲೆಗೆ ತೆರಳದಂತೆ ತಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಈಗಾಗಲೇ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಶಬರಿಮಲೆಗೆ ತೆರಳುವ ಮಹಿಳಾ ಭಕ್ತರಿಗೆ ಎಲ್ಲ ರೀತಿಯ ಭದ್ರತೆಯನ್ನು ಒದಗಿಸಲಾಗುವುದು ಎಂದವರು ತಿಳಿಸಿದ್ದಾರೆ. ವಿಜಯನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಸರಕಾರವೇ ಹೊಣೆ ಎಂದು ತಿಳಿಸಿದ್ದಾರೆ.

ಮಾತುಕತೆ ವಿಫಲ:                                                                                                                                                                      ಈ ಮಧ್ಯೆ, ಯುವಮಹಿಳಾ ಭಕ್ತರ ಶಬರಿಮಲೆ ಪ್ರವೇಶದ ಕುರಿತು ಟ್ರಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ), ತಂತ್ರಿ (ಶಬರಿಮಲೆಯ ಪ್ರಧಾನ ಅರ್ಚಕರು) ಮತ್ತು ಪಂದಳಂ ರಾಜಮನೆತನದ ಮಧ್ಯೆ ನಡೆದ ಮಾತುಕತೆ ವಿಫಲವಾಗಿದೆ ಎಂದು ರಾಜಮನೆತನದ ಶಶಿಕುಮಾರ ವರ್ಮಾ ತಿಳಿಸಿದ್ದಾರೆ. ಪುನರ್‌ಪರಿಶೀಲನಾ ಅರ್ಜಿಯ ಕುರಿತು ಅಕ್ಟೋಬರ್ 19ಕ್ಕೆ ಚರ್ಚೆ ನಡೆಸುವ ಎಂದು ಮಂಡಳಿಯು ತಿಳಿಸಿದೆ. ಇದರಿಂದ ನಮಗೆ ನಿರಾಸೆಯಾಗಿದೆ. ಈ ಸಭೆಯು ತೃಪ್ತಿದಾಯಕವಾಗಿರಲಿಲ್ಲ. ನಮ್ಮ ಬೇಡಿಕೆಯನ್ನು ಪೂರೈಸಲು ಅವರು ಸಿದ್ಧವಿಲ್ಲದ ಕಾರಣ ನಾವು ಸಭೆಯಿಂದ ಹೊರನಡೆದಿದ್ದೇವೆ ಎಂದು ವರ್ಮಾ ತಿಳಿಸಿದ್ದಾರೆ. ಶಬರಿಮಲೆ ಅಯ್ಯಪ್ಪ ದೇಗುಲ ಮತ್ತು ಅದರ ಅರ್ಚಕರ ಮೇಲೆ ಅಧಿಕಾರವನ್ನು ಹೊಂದಿರುವ ಪಂದಳ ರಾಜಮನೆತನ ಶಬರಿಮಲೆ ದೇಗುಲದಲ್ಲಿ ಸದ್ಯವಿರುವ ಪರಿಸ್ಥಿತಿಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದೆ. ಶ್ರೇಷ್ಠ ನ್ಯಾಯಾಲಯದ ಆದೇಶದ ವಿರುದ್ಧ ಪುನರ್‌ಪರಿಶೀಲನಾ ಅರ್ಜಿಯನ್ನು ದಾಖಲಿಸುವಂತೆ ಅದು ಸರಕಾರದ ಮೇಲೆ ಒತ್ತಡ ಹೇರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News