ಪ್ರಸಿದ್ಧ ಪ್ರವಾಸಿ ತಾಣ ಆಗ್ರಾದಲ್ಲಿ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸ್ಥಿತಿ ‘ಆಘಾತಕಾರಿ’: ಎನ್‌ಜಿಟಿ

Update: 2018-10-16 15:09 GMT

ಹೊಸದಿಲ್ಲಿ,ಅ.16: ಪ್ರಸಿದ್ಧ ಪ್ರವಾಸಿ ಕೇಂದ್ರ ಆಗ್ರಾದಲ್ಲಿ ಕುಡಿಯುವ ನೀರಿನ ಪೂರೈಕೆ,ಚರಂಡಿ ವ್ಯವಸ್ಥೆ ಮತ್ತು ಘನತ್ಯಾಜ್ಯ ನಿರ್ವಹಣೆ ಸ್ಥಿತಿಯು ‘ಆಘಾತಕಾರಿಯಾಗಿದೆ ’ ಎಂದು ಬಣ್ಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ವು,ಈ ಕುರಿತು ವರದಿಯೊಂದನ್ನು ಎರಡು ತಿಂಗಳಲ್ಲಿ ತನಗೆ ಸಲ್ಲಿಸುವಂತೆ ಸೂಚಿಸಿದೆ.

ಎನ್‌ಜಿಟಿ ಅಧ್ಯಕ್ಷ ನ್ಯಾ.ಆದರ್ಶಕುಮಾರ ಗೋಯೆಲ್ ನೇತೃತ್ವದ ಎನ್‌ಜಿಟಿ ಪೀಠವು ಈ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಾಸ್ತವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು,ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ನೀರಿ)ಯ ಪ್ರತಿನಿಧಿ ಮತ್ತು ಆಗ್ರಾ ಜಿಲ್ಲಾಧಿಕಾರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದೆ.

 ಹಿಂದಿನ ವರದಿಯನ್ನು 20 ವರ್ಷಗಳ ಹಿಂದೆ ಸಲ್ಲಿಸಿತ್ತು. ಈ 20 ವರ್ಷಗಳಲ್ಲಿ ಯಮುನೆಯಲ್ಲಿ ಬಹಳಷ್ಟು ನೀರು ಹರಿದಿದೆ. ಪ್ರಸಕ್ತ ಸನ್ನಿವೇಶವನ್ನು ನಿಭಾಯಿಸಲು ಇತ್ತೀಚಿನ ವರದಿಯು ಅಗತ್ಯವಾಗಿದೆ ಎಂದು ಪೀಠವು ಹೇಳಿತು.

ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಹಿಂದಿನ ನಿರ್ದೇಶನಗಳ ಪಾಲನೆಯ ಮೇಲೆ ನಿಗಾಯಿರಿಸಲು ಪ್ರಾದೇಶಿಕ ಸಮಿತಿಯೊಂದನ್ನು ರಚಿಸಲಾಗಿದೆಯಾದರೂ ಉತ್ತರ ವಲಯವು ವಿಸ್ತಾರವಾದ ಪ್ರದೇಶವನ್ನು ಒಳಗೊಂಡಿರುವುದರಿಂದ ಪ್ರತ್ಯೇಕ ಸಮಿತಿಯ ರಚನೆಯು ಅಗತ್ಯವಾಗಿದೆ ಎಂದು ಅದು ತಿಳಿಸಿತು.

ಕುಡಿಯುವ ನೀರು ಪೂರೈಕೆ,ಚರಂಡಿ ವ್ಯವಸ್ಥೆ ಮತ್ತು ಘನತ್ಯಾಜ್ಯ ನಿರ್ವಹಣೆ ಸಮಸ್ಯೆಗಳನ್ನು ತಾನು ಗಮನಕ್ಕೆ ತೆಗೆದುಕೊಂಡಿದ್ದು,ಅವುಗಳನ್ನು ಬಗೆಹರಿಸಲು ಸೂಕ್ತ ನಿರ್ದೇಶಗಳನ್ನು ಹೊರಡಿಸಿರುವುದಾಗಿ ಉತ್ತರ ಪ್ರದೇಶ ಸರಕಾರವು ನ್ಯಾಯಾಧಿಕರಣಕ್ಕೆ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News