ಕಾಂಗ್ರೆಸ್ ಸೇರಲಿರುವ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಪುತ್ರ

Update: 2018-10-16 14:42 GMT

ಹೊಸದಿಲ್ಲಿ, ಅ.16: ಬಿಜೆಪಿಯ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಪುತ್ರ, ರಾಜಸ್ತಾನ ವಿಧಾನಸಭೆಯ ಶಾಸಕ ಮಾನವೇಂದ್ರ ಸಿಂಗ್ ಬುಧವಾರ (ಅ.17) ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.

 ಮಹಾದುರ್ಗಾಷ್ಟಮಿಯ ದಿನದಂದು ದಿಲ್ಲಿಯಲ್ಲಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾನವೇಂದ್ರ ಸಿಂಗ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸಚಿನ್ ಪೈಲಟ್ ತಿಳಿಸಿದ್ದಾರೆ. ರಜಪೂತ ಸಮುದಾಯದ ಪ್ರಭಾವೀ ನಾಯಕರಾಗಿರುವ ಮಾನವೇಂದ್ರ ಸಿಂಗ್ ಸೇರ್ಪಡೆಯಿಂದ ಪಶ್ಚಿಮ ರಾಜಸ್ತಾನದಲ್ಲಿ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರಾಜಸ್ತಾನದ ಮತದಾರರಲ್ಲಿ ಶೇ.7ರಷ್ಟಿರುವ ರಜಪೂತರು ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ರಾಜಸ್ತಾನ ವಿಧಾನಸಭೆಗೆ ಡಿ.7ರಂದು ಚುನಾವಣೆ ನಡೆಯಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ಬಾರ್ಮರ್‌ನಿಂದ ಸ್ಪರ್ಧಿಸಲು ಜಸ್ವಂತ್ ಸಿಂಗ್ ಉತ್ಸುಕರಾಗಿದ್ದರೂ ಬಿಜೆಪಿ ಮುಖಂಡರು ಅವಕಾಶ ನಿರಾಕರಿಸಿದ್ದರು. ಬಳಿಕ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಜಸ್ವಂತ್ ಸೋಲುಂಡಿದ್ದರು. (ಜಸ್ವಂತ್ ಕಳೆದ ನಾಲ್ಕು ವರ್ಷಗಳಿಂದ ಕೋಮಾವಸ್ಥೆಯಲ್ಲಿದ್ದಾರೆ). ನಂತರ ಜಸ್ವಂತ್‌ರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು ಹಾಗೂ ಮಾನವೇಂದ್ರ ಸಿಂಗ್‌ರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿತ್ತು.

ವಾಜಪೇಯಿ ನೇತೃತ್ವದ ಸರಕಾರದಲ್ಲಿ ಪ್ರಭಾವೀ ಸಚಿವರಾಗಿದ್ದ ಜಸ್ವಂತ್ ಸಿಂಗ್‌ರನ್ನು ಮೂಲೆಗುಂಪು ಮಾಡುವಲ್ಲಿ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಕೈವಾಡವಿರುವ ಶಂಕೆಯನ್ನು ಮಾನವೇಂದ್ರ ಸಿಂಗ್ ಹಲವು ಬಾರಿ ವ್ಯಕ್ತಪಡಿಸಿದ್ದರು. ಬಿಜೆಪಿಯ ಜೊತೆ ಗುರುತಿಸಿಕೊಂಡಿದ್ದು ತನ್ನ ಬಹುದೊಡ್ಡ ಪ್ರಮಾದವಾಗಿದೆ. ಬಿಜೆಪಿಯೊಂದಿಗೆ ತನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇತ್ತು. ಕಳೆದ ನಾಲ್ಕೂವರೆ ವರ್ಷಗಳಿಂದ ಬಿಜೆಪಿ ನಾಯಕತ್ವಕ್ಕೆ ವಿಧೇಯನಾಗಿದ್ದೆ. ಆದರೆ ಇನ್ನು ಕಾಯಲು ಸಾಧ್ಯವಿಲ್ಲ. ತಾಳ್ಮೆಯ ಕಾಲ ಮುಗಿದಿದೆ . ಹಿಂದುತ್ವದ ಅರ್ಥವೇನು ಎಂಬುದು ಬಿಜೆಪಿ ಮುಖಂಡರಿಗೆ ಗೊತ್ತಿಲ್ಲ ಎಂದು ಮಾನವೇಂದ್ರ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News