ಪ್ರಿಯಾಂಕಾ ಛೋಪ್ರಾ ವಿವಾಹ ಮುಹೂರ್ತ ಫಿಕ್ಸ್!

Update: 2018-10-17 04:04 GMT

ಮುಂಬೈ, ಅ.17: ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೊನಾಸ್ ವಿವಾಹದ ಬಗ್ಗೆ ಪುಂಖಾನುಪುಂಖವಾಗಿ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆಬಿದ್ದಿದೆ. ಇತ್ತೀಚೆಗೆ ಈ ಜೋಡಿಹಕ್ಕಿ ಜೋಧ್‌ಪುರಕ್ಕೆ ಭೇಟಿ ನೀಡಿ ಆಪ್ತರನ್ನು ಭೇಟಿ ಮಾಡಿದ್ದು ಕೂಡಾ ಗಾಳಿಸುದ್ದಿಗೆ ಕಾರಣವಾಗಿತ್ತು. ಇವರು ವಿವಾಹ ಸಿದ್ಧತೆಯ ವೀಕ್ಷಣೆಗೆ ತೆರಳಿದ್ದಾರೆ ಎಂಬ ವದಂತಿ ಹರಡಿತ್ತು.

ಆದರೆ ಇದೀಗ ಅವರ ಆಪ್ತ ಮೂಲಗಳಿಂದ ತಿಳಿದುಬಂದಿರುವಂತೆ, ನಿಕ್- ಪ್ರಿಯಾಂಕಾ ವಿವಾಹ ದಿನಾಂಕ ನಿಗದಿಯಾಗಿದೆ. ಮೂರು ದಿನಗಳ ವಿವಾಹ ಮಹೋತ್ಸವ ಜೋಧ್‌ಪುರದಲ್ಲಿ ನಡೆಯಲಿದೆ. ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ಈ ಆಕರ್ಷಕ ನಗರದಲ್ಲಿ ವಿವಾಹದ ಸಂಪ್ರದಾಯಗಳು ನಡೆಯಲಿವೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಆಕರ್ಷಕ ಜೋಡಿ ಜೋಧ್‌ಪುರ ಅರಮನೆಯಲ್ಲಿ ಹಸೆಮಣೆ ಏರಲಿದ್ದಾರೆ. ವಿವಾಹ ಸಿದ್ಧತೆಗಾಗಿಯೇ ನಿಕ್ ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದರು. ವಿವಾಹ ಸ್ಥಳವನ್ನು ಅಂತಿಮಪಡಿಸಲು ಜೋಧ್‌ಪುರಕ್ಕೆ ಇಬ್ಬರೂ ಭೇಟಿ ನೀಡಿದ್ದರು. ಇಬ್ಬರೂ ವೈಯಕ್ತಿಕವಾಗಿ ಈ ಸ್ಥಳ ಆಯ್ಕೆ ಮಾಡಿದ್ದಾರೆ. ವಿವಾಹ ಮಹೋತ್ಸವದ ಸಣ್ಣಪುಟ್ಟ ಅಂಶಗಳಿಗೂ ಇಬ್ಬರೂ ವೈಯಕ್ತಿಕ ಗಮನ ಹರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ಆಗಸ್ಟ್ 18ರಂದು ಮುಂಬೈನಲ್ಲಿ ಇವರ ನಿಶ್ಚಿತಾರ್ಥ ನೆರವೇರಿತ್ತು. ಕಳೆದ ವರ್ಷದ ಮೆಟ್ ಗಾಲಾ ಸಮಾರಂಭದಲ್ಲಿ ಪರಸ್ಪರ ಭೇಟಿಯಾಗಿದ್ದ ಇವರಿಬ್ಬರು ಬಳಿಕ ಒಳ್ಳೆಯ ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿ ಈ ಸಂಬಂಧವನ್ನು ಮುಂದಿನ ಹಂತಕ್ಕೆ ಒಯ್ಯಲು ಉಭಯ ತಾರೆಯರು ನಿರ್ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News