ಅತ್ಯಂತ ಕಳಪೆ ಹಂತಕ್ಕೆ ಕುಸಿದ ದಿಲ್ಲಿಯ ವಾಯು ಗುಣಮಟ್ಟ

Update: 2018-10-17 17:50 GMT

ಹೊಸದಿಲ್ಲಿ, ಅ.17: ರಾಷ್ಟ್ರೀಯ ರಾಜಧಾನಿಯ ಹಲವು ಪ್ರದೇಶಗಳಲ್ಲಿ ವಾಯು ಮಾಲಿನ್ಯ ಗಂಭೀರ ಪ್ರಮಾಣಕ್ಕೆ ತಲುಪುವುದರೊಂದಿಗೆ ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ದಿಲ್ಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ಹಂತಕ್ಕೆ ಕುಸಿದಿದೆ.

  ದಿಲ್ಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯುಐ) 309ನ್ನು ತಲುಪಿದೆ ಎಂದು ವಾಯು ಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರದ ಮಾಹಿತಿಯಲ್ಲಿ ತಿಳಿಸಲಾಗಿದೆ. 0ಯಿಂದ 50ರವರೆಗಿನ ಎಕ್ಯುಐ ಉತ್ತಮ, 51ರಿಂದ 100 ತೃಪ್ತಿಕರ, 101ರಿಂದ 200 ಮಧ್ಯಮ, 201ರಿಂದ 300 ಕಳಪೆ, 301ರಿಂದ 400 ಅತ್ಯಂತ ಕಳಪೆ, 401ರಿಂದ 500 ಗಂಭೀರ ಎಂದು ವರ್ಗೀಕರಿಸಲಾಗಿದೆ. ಮುಂಬರುವ ದಿನಗಳಲ್ಲಿ ವಾಯು ಗುಣಮಟ್ಟ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

 ಬುಧವಾರ ದಿಲ್ಲಿಯ ಆನಂದವಿಹಾರ ಪ್ರದೇಶದಲ್ಲಿ 380 ಎಕ್ಯುಐ, ದ್ವಾರಕಾ ಕ್ಷೇತ್ರ 8ರಲ್ಲಿ 376 ಎಕ್ಯುಐ, ಐಟಿಒ 295 ಎಕ್ಯುಐ, ಜಹಂಗೀರ್‌ಪುರಿ 349 ಎಕ್ಯುಐ, ರೋಹಿಣಿ 353 ಎಕ್ಯುಐ ದಾಖಲಿಸಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

 ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ತುರ್ತು ಕ್ರಿಯಾಯೋಜನೆಯೊಂದನ್ನು ಜಾರಿಗೊಳಿಸಿದ ಮರುದಿನವೇ ವಾಯು ಗುಣಮಟ್ಟ ಕುಸಿದಿದೆ. ಉತ್ತರ ಭಾರತದಲ್ಲಿ ಬೆಳೆ ತ್ಯಾಜ್ಯ ಸುಡುವ ಸಮಯ ಇದಾಗಿದ್ದು ಆ ಕಡೆಯಿಂದ ಬೀಸುವ ಗಾಳಿಯ ಜೊತೆಗೆ ದಟ್ಟವಾದ ಹೊಗೆಯೂ ದಿಲ್ಲಿಯತ್ತ ಬರುತ್ತಿದೆ. ಅಲ್ಲದೆ ವಾಹನ ಸಂಖ್ಯೆ ಹೆಚ್ಚಾಗಿರುವುದು ಮತ್ತು ನಿರ್ಮಾಣ ಕಾಮಗಾರಿಯ ಹೆಚ್ಚಳ ವಾಯು ಗುಣಮಟ್ಟ ಕುಸಿತಕ್ಕೆ ಪ್ರಧಾನ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News