ಕಾಶ್ಮೀರ: ಗ್ರೆನೇಡ್ ದಾಳಿಯಲ್ಲಿ ಪೊಲೀಸರಿಗೆ ಗಾಯ; ಉಗ್ರನ ಸೆರೆ

Update: 2018-10-17 18:39 GMT

ಶ್ರೀನಗರ, ಅ.17: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ನಗರದಲ್ಲಿ ಗ್ರೆನೇಡ್ ದಾಳಿಯಲ್ಲಿ ಡಿಎಸ್ಪಿ ಸಹಿತ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಇದೇ ಸಂದರ್ಭ ಓರ್ವ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾರಾಮುಲ್ಲಾ- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಭಯೋತ್ಪಾದಕರು ವಾಹನಗಳಲ್ಲಿ ಸಾಗುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಪ್ರಯಾಣಿಕರ ವಾಹನವೊಂದನ್ನು ನಿಲ್ಲಿಸುವಂತೆ ಪೊಲೀಸರು ಸಂಜ್ಞೆ ಮಾಡಿದಾಗ ಅದರಲ್ಲಿದ್ದ ಭಯೋತ್ಪಾದಕರು ಪೊಲೀಸರತ್ತ ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ. ಆಗ ಒಬ್ಬರು ಅಧಿಕಾರಿ ಹಾಗೂ ಇಬ್ಬರು ಪೊಲೀಸರು ಗಾಯಗೊಂಡರು. ಸ್ಫೋಟದಲ್ಲಿ ಹಲವು ವಾಹನಗಳಿಗೆ ಹಾನಿಯಾಗಿದ್ದು, ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

 ತಕ್ಷಣ ಪೊಲೀಸರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪರಾರಿಯಾಗುತ್ತಿದ್ದ ಭಯೋತ್ಪಾದಕರನ್ನು ಬೆನ್ನಟ್ಟಿದ ಪೊಲೀಸರು ಓರ್ವನನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ. ಈತನನ್ನು ನೈಬುಗ್ ತ್ರಾಲ್ ನಿವಾಸಿ ಫೈಝಾನ್ ಮಜೀದ್ ಎಂದು ಗುರುತಿಸಲಾಗಿದ್ದು ಈತ ಅಕ್ಟೋಬರ್ 3ರಂದು ತೆಹ್ರೀಕ್ ಉಲ್ ಮುಜಾಹಿದೀನ್ ಸಂಘಟನೆಗೆ ಸೇರ್ಪಡೆಗೊಂಡಿದ್ದ ಎಂದು ತಿಳಿದುಬಂದಿದೆ. ತಪ್ಪಿಸಿಕೊಂಡವರಲ್ಲಿ ಓರ್ವನ ಹೆಸರು ಶೌಕತ್ ಅಹ್ಮದ್ ಭಟ್ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಶ್ರೀನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News