ಮಹಿಳೆಯರಿಗೆ ಸಿಗದ ಶಬರಿಮಲೆ ಪ್ರವೇಶ

Update: 2018-10-18 03:59 GMT

ಶಬರಿಮಲೆ, ಅ. 18: ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರೂ ಸೇರಿದಂತೆ ಎಲ್ಲ ಮಹಿಳೆಯರಿಗೆ ಶಬರಿಮಲೆ ದೇವಾಲಯಕ್ಕೆ ಪ್ರವೇಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಬುಧವಾರ ಮೊಟ್ಟಮೊದಲ ಬಾರಿಗೆ ಈ ಪ್ರಸಿದ್ಧ ದೇಗುಲ ತೆರೆಯಲ್ಪಟ್ಟಿದ್ದು, ಸುಪ್ರೀಂ ತೀರ್ಪಿನ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೊದಲನೇ ದಿನ ಯಾವ ಮಹಿಳೆಯೂ ದೇವಾಲಯ ತಲುಪಲು ಸಾಧ್ಯವಾಗಿಲ್ಲ.

ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿರುವ ಸಂಘಟನೆಗಳು ಭಾರಿ ಸಂಖ್ಯೆಯ ಪ್ರತಿಭಟನಕಾರರನ್ನು ಕ್ರೋಢೀಕರಿಸಿದ್ದು, 10 ರಿಂದ 50ರ ವಯೋಮಾನದ ಯಾವ ಮಹಿಳೆಯೂ ದೇವಾಲಯದ ಸುತ್ತಮುತ್ತ ಬುಧವಾರ ತಡರಾತ್ರಿವರೆಗೆ ಕಾಣಸಿಗಲಿಲ್ಲ.

ಅತಿಸನಿಹ ಎಂದರೆ ಶಬರಿಮಲೆ ಬೆಟ್ಟ ಏರುವ ತಪ್ಪಲಲ್ಲಿ ಅಂದರೆ ಪಂಬಾ ನದಿಯ ಬಳಿ ಈ ವಯೋಮಾನದ ಮಹಿಳೆಯರು ತಲುಪಬಹುದಾಗಿದೆ. ಅಲ್ಲಿಂದ ಆರು ಕಿಲೋಮೀಟರ್ ದೂರವನ್ನು ಭಕ್ತರು ಬೆಟ್ಟ ಹತ್ತುವ ಮೂಲಕ ಕ್ರಮಿಸಬೇಕು. ಮಹಿಳಾ ವಿರೋಧಿ ಹೋರಾಟಗಾರರು ನಿರ್ಮಿಸಿರುವ ಎಲ್ಲ "ಚೆಕ್‌ಪೋಸ್ಟ್"ಗಳನ್ನು ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದ ಆಂಧ್ರಪ್ರದೇಶದ 45ರ ಮಹಿಳೆ, ಶಬರಿಮಲೆಯಿಂದ 20 ಕಿಲೋಮೀಟರ್ ದೂರ ನೀಲಕ್ಕಲ್ ತಲುಪಿದ್ದಾರೆ. ಪಂಬಾ ನದಿವರೆಗೂ ಸಂಪೂರ್ಣ ಪೊಲೀಸ್ ಬೆಂಗಾವಲಿನಲ್ಲಿ ತಲುಪಿದ ಈ ಮಹಿಳೆ, ಕೇವಲ 300 ಮೀಟರ್ ದೂರ ನಡೆದು ತಮ್ಮ ಯಾತ್ರೆ ಮುಂದುವರಿಸದಿರಲು ನಿರ್ಧರಿಸಿದರು. "ಶಬರಿಮಲೆ ಸಂರಕ್ಷಿಸಿ" ಆಂದೋಲನದ ನೂರಾರು ಕಾರ್ಯಕರ್ತರು, ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಬೆದರಿಸಿ ಕಳುಹಿಸಿದ್ದಾರೆ.

ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನೀಲಕ್ಕಲ್‌ನಲ್ಲಿ ಅಕ್ಷರಶಃ ಸಮರ ನಡೆಯುತ್ತಿದ್ದು, ಮಹಿಳೆಯರು ಇರುವ ವಾಹನಗಳನ್ನು ಪ್ರತಿಭಟನಕಾರರು ತಡೆದು ನಿಲ್ಲಿಸುತ್ತಿದ್ದಾರೆ. ಲಾಠಿ ಪ್ರಹಾರದಿಂದ ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದ ಮರುಕ್ಷಣದಲ್ಲೇ, ರಸ್ತೆ ತಡೆದು ಪೊಲೀಸರತ್ತ ಕಲ್ಲು ತೂರಾಟ ನಡೆಸಿ ಪ್ರತಿಭಟನಕಾರರು ಸೇರುತ್ತಿದ್ದಾರೆ. ಟಿವಿ ಚಾನಲ್‌ಗಳ ಎರಡು ವಾಹನಗಳು ಸೇರಿದಂತೆ ಮೂರು ವಾಹನಗಳು ಜಖಂಗೊಂಡಿವೆ. ಬಸ್ಸಿನ ಗಾಜು ಗಳು ಕಲ್ಲುತೂರಾಟದಿಂದ ಚೂರು ಚೂರಾಗಿವೆ. ಪೊಲೀಸ್ ವಾಹನದ ಮೇಲೂ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News