ವಿದ್ಯಾರ್ಥಿ ಸಂಘದ ಅಧ್ಯಕ್ಷನ ನಕಲಿ ಅಂಕಪಟ್ಟಿ ಬಗ್ಗೆ ದೆಹಲಿ ವಿವಿ ಮೌನ ?

Update: 2018-10-18 04:28 GMT

ಹೊಸದಿಲ್ಲಿ, ಅ. 18: ದೆಹಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಕಿವ್ ಬೈಸೋಯಾ ವಿರುದ್ಧ ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ನಡೆದರೂ, ಇದುವರೆಗೆ ದೆಹಲಿ ವಿವಿಯಿಂದ ಯಾವುದೇ ಅಧಿಕೃತ ಪತ್ರ ಬಂದಿಲ್ಲ ಎಂದು ವೆಲ್ಲೂರಿನ ತಿರುವಳ್ಳುವರ್ ವಿಶ್ವವಿದ್ಯಾನಿಲಯ ಸ್ಪಷ್ಟಪಡಿಸಿದೆ.

ಈ ವಿಷಯದ ಬಗ್ಗೆ ಎರಡು ಪತ್ರ ಮತ್ತು ಮೂರು ನೆನಪೋಲೆಗಳನ್ನು ಕಳುಹಿಸಲಾಗಿದೆ ಎಂದು ದೆಹಲಿ ವಿವಿ ಹೇಳಿಕೊಂಡಿರುವುದನ್ನು ತಿರುವಳ್ಳುವರ್ ವಿವಿ ನಿರಾಕರಿಸಿದೆ.

ಟೈಮ್ಸ್ ಆಫ್ ಇಂಡಿಯಾ ಬಾತ್ಮೀದಾರರು ದೆಹಲಿ ವಿವಿಯ ಉನ್ನತಾಧಿಕಾರಿಗಳಿಗೆ ಅ. 5, 9 ಹಾಗೂ 17ರಂದು ಸರಣಿ ಪತ್ರಗಳನ್ನು ಬರೆದು ಸ್ಪಷ್ಟನೆ ಕೇಳಿದ್ದರೂ, ಇದುವರೆಗೆ ವಿವಿ ಯಾವ ಪತ್ರಕ್ಕೂ ಉತ್ತರಿಸಿಲ್ಲ. ಬೈಸೋಯಾ ನಮ್ಮ ರಾಜ್ಯದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಲ್ಲ ಎಂದು ಸೆಪ್ಟೆಂಬರ್ ಮೂರನೇ ವಾರದಲ್ಲೇ ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿತ್ತು. ಅದರೆ ತಿರುವುಳ್ಳವರ್ ವಿವಿ ಅಧಿಕಾರಿಗಳ ದೂರವಾಣಿ ಅಥವಾ ಫ್ಯಾಕ್ಸ್ ಸಂಖ್ಯೆ ತಮ್ಮ ಬಳಿ ಇಲ್ಲ ಎಂದು ದೆಹಲಿ ವಿವಿ ಬೌದ್ಧ ಅಧ್ಯಯನ ವಿಭಾಗ ಪ್ರತಿಪಾದಿಸಿತ್ತು.

ಬುಧವಾರ ದೆಹಲಿ ವಿವಿ ಬೌದ್ಧ ಅಧ್ಯಯನ ವಿಭಾಗದ ಮುಖ್ಯಸ್ಥ ಕೆ.ಟಿ.ಎಸ್.ಸರಾವೊ ಅವರನ್ನು ಸಂಪರ್ಕಿಸಿದಾಗ, "ನಾವು ಎರಡನೇ ಪತ್ರವನ್ನು ತಿರುವುಳ್ಳವರ್ ವಿವಿಗೆ ಮಂಗಳವಾರ ಕಳುಹಿಸಿದ್ದೇವೆ. ಅಲ್ಲಿನ ಅಧಿಕಾರಿಗಳ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ" ಎಂದು ಹೇಳಿದರು. ಮೊದಲ ಪತ್ರ ಬರೆದು 20 ದಿನ ಕಳೆದರೂ ವಿವಿಯಿಂದ ಯಾವ ಉತ್ತರವೂ ಬಂದಿಲ್ಲ ಎನ್ನುವುದು ಅವರ ಆರೋಪ.

ಆದರೆ ಈ ಆರೋಪವನ್ನು ತಿರುವುಳ್ಳವರ್ ವಿವಿ ರಿಜಿಸ್ಟ್ರಾರ್ ವಿ.ಪೆರುಮಲ್ಲುತಿ ಅಲ್ಲಗಳೆದಿದ್ದಾರೆ. "ಇಂದಿನವರೆಗೂ ಯಾವುದೇ ಪತ್ರ ಬಂದಿಲ್ಲ. ದೆಹಲಿ ವಿವಿಯಿಂದ ಯಾವುದೇ ಸಂಪರ್ಕ ಇಲ್ಲ. ದೆಹಲಿ ವಿವಿ ಇದಕ್ಕೆ ವಿರುದ್ಧವಾಗಿ ಏಕೆ ಹೇಳಿಕೆ ನೀಡುತ್ತಿದೆ ಎಂದು ತಿಳಿಯಲು" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News