ಪಾಕಿಸ್ತಾನ ಪರ ಬೇಹುಗಾರಿಕೆ: ಭಾರತೀಯ ಸೈನಿಕ ಬಂಧನ

Update: 2018-10-18 04:57 GMT

ಲಕ್ನೋ, ಅ. 18: ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಜತೆ ಪ್ರಮುಖ ಮಾಹಿತಿ ಹಂಚಿಕೊಂಡ ಆರೋಪದಲ್ಲಿ ಭಾರತೀಯ ಸೇನೆಯ ಸಿಗ್ನಲ್ಸ್ ರೆಜಿಮೆಂಟ್‌ನ ಸೈನಿಕನೊಬ್ಬನನ್ನು ಮಿಲಿಟರಿ ಪೊಲೀಸರು ಮೀರಠ್‌ನ ಸೇನಾ ಕಂಟೋನ್ಮೆಂಟ್‌ನಲ್ಲಿ ಬಂಧಿಸಿದ್ದಾರೆ.

ಸಿಗ್ನಲ್ಸ್‌ಮ್ಯಾನ್ ಹೊಣೆ ಹೊಂದಿದ್ದ ಈ ಸೈನಿಕನನ್ನು ಮೂರು ದಿನಗಳ ಹಿಂದೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದು, ಇದೀಗ ಅಧಿಕೃತವಾಗಿ ಆತನನ್ನು ಬಂಧಿಸಲಾಗಿದೆ.

ಈತ ನೆರೆಯ ದೇಶದ ಉನ್ನತ ಅಧಿಕಾರಿಗಳು ಭಾರತದ ಗಡಿಯೊಳಕ್ಕೆ ನುಗ್ಗಿಸಿದ ಪಾಕಿಸ್ತಾನಿ ಗೂಢಚರ್ಯ ಆಗಿರುವ ಸಾಧ್ಯತೆಯನ್ನೂ ಅಲ್ಲಗಳೆಯು ವಂತಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಕಮಾಂಡ್ ಬೇಸ್‌ನ ವರ್ಗೀಕೃತ ಹಾಗೂ ಸೂಕ್ಷ್ಮ ಮಾಹಿತಿಗಳನ್ನು ಈತ ಪಾಕಿಸ್ತಾನದ ಜತೆ ಹಂಚಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಅಲ್ಲಿನ ಸೇನಾ ತುಕಡಿ ಮತ್ತು ಮೀರಠ್ ಕಂಟೋನ್ಮೆಂಟ್‌ನ ಸುತ್ತಮುತ್ತಲ ಪರಿಸರದ ಬಗೆಗಿನ ಮಾಹಿತಿಯನ್ನೂ ನೀಡಿದ್ದಾನೆ ಎನ್ನಲಾಗಿದೆ.

ಆದರೆ ಈ ಸೈನಿಕನ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಈತ ಉತ್ತರಾಖಂಡ ಮೂಲದವನಾಗಿದ್ದು, ಕಳೆದ 10 ತಿಂಗಳಿಂದ ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಪಾಕಿಸ್ತಾನಿಯರ ಜತೆ ಈತ ದೂರವಾಣಿ ಸಂಭಾಷಣೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸೇನೆಯ ಗುಪ್ತಚರ ವಿಭಾಗ ಈತನ ಚಲನ ವಲನಗಳ ಬಗ್ಗೆ ಸಂದೇಹಗೊಂಡು ತನಿಖೆಗೆ ಗುರಿಪಡಿಸಿದಾಗ ಈ ಕೃತ್ಯ ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News