10,000 ಏಕದಿನ ರನ್ ಕ್ಲಬ್‌ಗೆ ಸೇರಲು ವಿರಾಟ್ ಕೊಹ್ಲಿ ಸಜ್ಜು

Update: 2018-10-18 07:43 GMT

ಹೊಸದಿಲ್ಲಿ, ಅ.18: ವಿಶ್ವ ಕ್ರಿಕೆಟ್‌ನ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೊಹ್ಲಿ ಅಂತರ್‌ರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಭಾರತದ ಐದನೇ ಹಾಗೂ ವಿಶ್ವದ 13ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗುವತ್ತ ಹೆಜ್ಜೆ ಇಟ್ಟ್ಟಿದ್ದಾರೆ.

 211 ಏಕದಿನ ಪಂದ್ಯಗಳಲ್ಲಿ 58.20ರ ಸರಾಸರಿಯಲ್ಲಿ 9,779 ರನ್ ಗಳಿಸಿರುವ ಕೊಹ್ಲಿಗೆ 10,000 ಏಕದಿನ ಕ್ರಿಕೆಟ್ ಕ್ಲಬ್‌ಗೆ ಸೇರ್ಪಡೆಯಾಗಲು ಕೇವಲ 221 ರನ್ ಅಗತ್ಯವಿದೆ.

ಅಕ್ಟೋಬರ್ 21 ರಂದು ಗುವಾಹತಿಯಲ್ಲಿ ಆರಂಭವಾಗಲಿರುವ ವೆಸ್ಟ್ಟ್‌ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ವೇಳೆ ಕೊಹ್ಲಿಗೆ ಈ ಸಾಧನೆ ಮಾಡಲು ಅಪೂರ್ವ ಅವಕಾಶವಿದೆ.

ಒಂದು ವೇಳೆ ಕೊಹ್ಲಿ ಏಕದಿನ ಸರಣಿಯಲ್ಲಿ 221 ರನ್ ಗಳಿಸಿದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ  ಬಳಿಕ ಸಾಧನೆ ಮಾಡಿದ ಭಾರತದ 5ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ತೆಂಡುಲ್ಕರ್(18,426 ರನ್), ಕುಮಾರ ಸಂಗಕ್ಕರ(14,234), ಆಸ್ಟ್ರೇಲಿಯದ ರಿಕಿ ಪಾಂಟಿಂಗ್(13,704 ), ಶ್ರೀಲಂಕಾದ ಜಯಸೂರ್ಯ(13,430), ಮಹೇಲ ಜಯವರ್ಧನೆ(12,650), ಪಾಕಿಸ್ತಾನದ ಇಂಝಾಮಾಮ್‌ವುಲ್ ಹಕ್(11,739 ), ದ.ಆಫ್ರಿಕದ ಜಾಕ್ ಕಾಲಿಸ್(11,579), ಸೌರವ್ ಗಂಗುಲಿ(11,363), ರಾಹುಲ್ ದ್ರಾವಿಡ್(10,889), ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ(10,405), ಶ್ರೀಲಂಕಾದ ತಿಲಕರತ್ನೆ ದಿಲ್ಶನ್(10,290) ಹಾಗೂ ಎಂ.ಎಸ್. ಧೋನಿ(10,123 ರನ್)10,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News