ಚೆಂಡು ಬೌಂಡರಿ ಗೆರೆ ದಾಟಿದೆ ಎಂದು ಭಾವಿಸಿ ರನೌಟಾದ ಅಝರ್ ಅಲಿ!

Update: 2018-10-18 08:21 GMT

ಅಬುಧಾಬಿ, ಅ.18: ಆಸ್ಟ್ರೇಲಿಯ ವಿರುದ್ಧ ಎರಡನೇ ಟೆಸ್ಟ್‌ನ 3ನೇ ದಿನವಾದ ಗುರುವಾರ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ದಾಂಡಿಗ ಅಝರ್ ಅಲಿ ವಿಚಿತ್ರ ರೀತಿಯಲ್ಲಿ ರನೌಟಾಗಿದ್ದಾರೆ.

64 ರನ್ ಗಳಿಸಿದ್ದ ಅಲಿ ಆಸೀಸ್ ವೇಗಿ ಪೀಟರ್ ಸಿಡ್ಲ್ ಎಸೆತವೊಂದನ್ನು ಗಲ್ಲಿಯತ್ತ ತಳ್ಳಿದರು. ಚೆಂಡು ಬೌಂಡರಿಯತ್ತ ಧಾವಿಸಿತು. ಪಾಕ್ ದಾಂಡಿಗ ಅಲಿ ಚೆಂಡು ಬೌಂಡರಿ ಗೆರೆ ದಾಟಿದೆ ಎಂದು ಭಾವಿಸಿ ಪಿಚ್‌ನ ಮಧ್ಯಕ್ಕೆ ತೆರಳಿ ಸಹ ಆಟಗಾರ ಅಸದ್ ಶಫಿಕ್‌ರೊಂದಿಗೆ ಚರ್ಚಿಸುತ್ತಿದ್ದರು.

  ಆದರೆ, ನಿಜವಾಗಿಯೂ ಚೆಂಡು ಬೌಂಡರಿ ಗೆರೆ ಸಮೀಪ ಹೋಗಿ ನಿಂತಿತು. ಚೆಂಡನ್ನು ಕೈಗೆತ್ತಿಕೊಂಡ ಫೀಲ್ಡರ್ ಮಿಚೆಲ್ ಸ್ಟಾರ್ಕ್ ತಕ್ಷಣವೇ ವಿಕೆಟ್‌ಕೀಪರ್ ಟಿಮ್ ಪೈನೆಯತ್ತ ಎಸೆದರು. ಪೈನೆ ಅವರು ಕ್ರೀಸ್‌ಬಿಟ್ಟು ತೆರಳಿದ್ದ ಅಲಿ ಅವರನ್ನು ರನೌಟ್ ಮಾಡಿದರು. ಅಲಿ ರನೌಟಾಗುವುದನ್ನು ತಪ್ಪಿಸಿಕೊಳ್ಳಲು ಯತ್ನಿಸದೇ ಸುಮ್ಮನೇ ನೋಡುತ್ತಾ ನಿಂತಿದ್ದರು.

  ಅಲಿ ಅವರ ತಮಾಷೆಯ ರನೌಟ್‌ನ್ನು ಕೆಲವರು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ. ಇದೊಂದು ಕ್ರಿಕೆಟ್ ಇತಿಹಾಸದಲ್ಲಿ ನಂಬಲಸಾಧ್ಯವಾದ ರನೌಟ್ ಎಂದು ತಮಾಷೆ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News