‘ವೈಲ್ಡ್ ಲೈಫ್ ಫೋಟೊಗ್ರಾಫರ್’ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಭಾರತದ 10 ವರ್ಷದ ಬಾಲಕ

Update: 2018-10-18 10:54 GMT

ಹೊಸದಿಲ್ಲಿ, ಅ. 18: ಪಂಜಾಬ್‍ನ 10 ವರ್ಷದ ಬಾಲಕ ಅರ್ಷದೀಪ್ ಸಿಂಗ್ ಕ್ಲಿಕ್ಕಿಸಿದ ಫೋಟೋ 'ಪೈಪ್ ಔಲ್ಸ್' ಬ್ರಿಟನ್ ದೇಶದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ತನ್ನ 53ನೇ ವರ್ಷದ ವನ್ಯಜೀವಿ ಛಾಯಾಗ್ರಾಹಕ ಸ್ಪರ್ಧೆಯ 10 ವರ್ಷ ಹಾಗೂ ಕೆಳಗಿನ ವಯೋಮಿತಿ ವಿಭಾಗದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದೆ.

ಕೊಳವೆಯೊಂದರ ಒಳಗೆ ಕುಳಿತುಕೊಂಡು ಹೊರಗೆ ಇಣುಕುತ್ತಿರುವ ಜೋಡಿ ಗೂಬೆಗಳ ಚಿತ್ರ ಅದಾಗಿದೆ.

ತಂದೆಯೊಂದಿಗೆ ಪಂಜಾಬ್ ರಾಜ್ಯದ ಕಪುರ್ತಲಾದಲ್ಲಿ ಸಾಗುತ್ತಿದ್ದಾಗ ಹಳೆಯ ನಿರುಪಯೋಗಿ ಕೊಳವೆಯೊಂದರಲ್ಲಿ ಈ ಗೂಬೆಗಳನ್ನು ನೋಡಿದ ಅರ್ಷದೀಪ್ ಕೂಡಲೇ ತಂದೆಗೆ ಕಾರು ನಿಲ್ಲಿಸಲು ಹೇಳಿ ಕಾರಿನ ಅರ್ಧ ತೆರೆದ ಗಾಜಿನ ಮೇಲೆ ಕ್ಯಾಮರಾ ಇರಿಸಿ ಅವುಗಳ ಫೋಟೋ ಕ್ಲಿಕ್ಕಿಸಿದ್ದ. ಗೂಬೆಗಳು ಹಗಲಲ್ಲಿ  ಕಾಣಲು ಸಿಗದೇ ಇರುವುದರಿಂದ ಇದೊಂದು ಅಪರೂಪದ ಫೋಟೋ ಆಗಿತ್ತು.

ಆರು ವರ್ಷದವನಿರುವಾಗಲೇ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳೆಸಿದ್ದ ಅರ್ಷದೀಪ್ 2012ರಿಂದ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾನೆ. ಬಾಲಕನ ತಂದೆ ರಣದೀಪ್ ಸಿಂಗ್ ಕೂಡ ಖ್ಯಾತ ಛಾಯಾಗ್ರಾಹಕರಾಗಿದ್ದಾರೆ.

ಇತ್ತೀಚೆಗೆ ಅರ್ಷದೀಪ್ ಜೂನಿಯರ್ ಏಷ್ಯನ್ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಫ್ ದಿ ಇಯರ್ ಪ್ರಶಸ್ತಿ ಗಳಿಸಿದ್ದ. ಆತ ಕ್ಲಿಕ್ಕಿಸಿದ ಚಿತ್ರಗಳು ಲೋನ್ಲಿ ಪ್ಲಾನೆಟ್ ಯುಕೆ, ಜರ್ಮನಿ, ಇಂಡಿಯಾ, ಬಿಬಿಸಿ ಮೊದಲಾದ ಕಡೆಗಳಲ್ಲಿ ಪ್ರಕಟವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News