ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ತೀರ್ಪಿನವರೆಗೆ ಕಾಯಬೇಕು: ಜೆಡಿಯು

Update: 2018-10-19 06:49 GMT

ಪಾಟ್ನಾ, ಅ.18: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಂಬಂಧ ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸುವಂತೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗ್ರಹಿಸಿದ ಬೆನ್ನಲ್ಲೇ, ಬಿಹಾರದಲ್ಲಿ ಆಡಳಿತಾರೂಢ ಎನ್‍ ಡಿಎ ಮೈತ್ರಿಕೂಟದ ಅಂಗಪಕ್ಷವಾದ ಸಂಯುಕ್ತ ಜನತಾದಳ ಆರೆಸ್ಸೆಸ್ ನಿಲುವನ್ನು ವಿರೋಧಿಸಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ವರೆಗೆ ಕಾಯಬೇಕು ಎಂದು ಜೆಡಿಯು ಸಲಹೆ ಮಾಡಿದೆ.

ಈ ವಿವಾದಾತ್ಮಕ ವಿಚಾರವನ್ನು ಕಾನೂನಾತ್ಮಕ ವಿಧಾನದ ಮೂಲಕ ಬಗೆಹರಿಸಬೇಕು ಅಥವಾ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಮಾತುಕತೆ ನಡೆಸುವ ಮೂಲಕ ಬಗೆಹರಿಸಬೇಕು ಎನ್ನುವುದು ನಮ್ಮ ಪಕ್ಷದ ದೃಢವಾದ ನಂಬಿಕೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಸ್ಪಷ್ಟಪಡಿಸಿದ್ದಾರೆ.

"ಈ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ಬಾಕಿ ಇರುವುದರಿಂದ, ಈ ವಿವಾದವನ್ನು ಉಲ್ಬಣಗೊಳಿಸುವ ಬದಲು, ಕಾಯುವುದು ಒಳ್ಳೆಯದು ಎಂಬ ನಂಬಿಕೆ ನಮ್ಮದು. ಈ ವಿಚಾರದಲ್ಲಿ ತೀರ್ಪು ಬಂದ ಬಳಿಕ ಸಂಬಂಧಪಟ್ಟವರು ಇದನ್ನು ಗೌರವಿಸಬೇಕು" ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ವಿಜಯದಶಮಿ ಸಂದೇಶದಲ್ಲಿ, "ರಾಮಮಂದಿರ ನಿರ್ಮಾಣಕ್ಕೆ ಸೂಕ್ತ ಹಾಗೂ ಅಗತ್ಯವಾದ ಕಾನೂನು ಜಾರಿಗೊಳಿಸಬೇಕು" ಎಂದು ಆಗ್ರಹಿಸಿದ್ದರು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹೊಸ ಹಸ್ತಕ್ಷೇಪವನ್ನು ಅಭಿವ್ಯಕ್ತಪಡಿಸುವ ಮೂಲಕ ಕೆಲ ನಿರ್ದಿಷ್ಟ ಅಂಶಗಳು ತೀರ್ಪನ್ನು ತಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News