ಮತ್ತೊಬ್ಬ ವಲಸೆ ಕಾರ್ಮಿಕನ ಮೇಲೆ ಅತ್ಯಾಚಾರ ಆರೋಪ: ಗುಜರಾತ್ ಉದ್ವಿಗ್ನ

Update: 2018-10-18 16:00 GMT

ಹೊಸದಿಲ್ಲಿ, ಅ.18: ಬಿಹಾರ ಮೂಲದ ವಲಸೆ ಕಾರ್ಮಿಕನೊಬ್ಬನ ವಿರುದ್ಧ ಸೂರತ್ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸುವುದರೊಂದಿಗೆ ರಾಜ್ಯದಲ್ಲಿ ವಲಸೆ ಕಾರ್ಮಿಕರ ವಿರುದ್ಧ ಎದ್ದಿರುವ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಆರೋಪವನ್ನು ಈತನ ಮೇಲೆ ಹೊರಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ವಲಸೆ ಕಾರ್ಮಿಕನಿಂದ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದ ಬಳಿಕ ಹಿಂದಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ವಲಸೆ ಕಾರ್ಮಿಕರು ಗುಜರಾತ್‍ನಿಂದ ಪಲಾಯನ ಮಾಡಿದ್ದರು. ಆದರೆ ಸೂರತ್ ನಗರದಲ್ಲಿ ಹಿಂಸಾಚಾರ ಸಂಭವಿಸಿರಲಿಲ್ಲ. ಅಹ್ಮದಾಬಾದ್ ಸೇರಿದಂತೆ ಉತ್ತರ ಗುಜರಾತ್‍ನಲ್ಲಿ ಹಿಂಸಾಚಾರ ನಡೆದಿತ್ತು.

ವಡೋದರಲ್ಲಿ ಸೋಮವಾರ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಬಿಹಾರ ಮೂಲದ ಆರು ಮಂದಿ ನಿರ್ಮಾಣ ಕಾರ್ಮಿಕರು ಮತ್ತು ಸಿವಿಲ್ ಎಂಜಿನಿಯರ್ ಮೇಲೆ ಲುಂಗಿ ಉಟ್ಟಿದ್ದಾರೆ ಎಂಬ ಕಾರಣಕ್ಕೆ ಹಲ್ಲೆ ನಡೆದಿತ್ತು.

ಅತ್ಯಾಚಾರಕ್ಕೆ ತುತ್ತಾದ ಮೂರು ವರ್ಷದ ಮಗುವಿನ ಕುಟುಂಬ ಕೂಡಾ ಮಹಾರಾಷ್ಟ್ರದಿಂದ ಗುಜರಾತ್‍ಗೆ ವಲಸೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಶಂಕಿತನನ್ನು ಪತ್ತೆ ಮಾಡಲಾಗಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ತಿಳಿಸಿದ್ದಾರೆ.

ಆರೋಪಿ ವಿರುದ್ಧ ಅತ್ಯಾಚಾರ, ದೌರ್ಜನ್ಯ, ಹತ್ಯೆ ಮತ್ತು ಪೋಕ್ಸೊ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News