50 ವರ್ಷಗಳ ಬಳಿಕ ಸೇನೆಯಿಂದ ಕೋಟ್ಯಧಿಪತಿಗಳಾದ ಅರುಣಾಚಲಪ್ರದೇಶದ ಗ್ರಾಮಸ್ಥರು

Update: 2018-10-19 17:57 GMT

ಇಟಾನಗರ್, ಅ. 19: ಅರುಣಾಚಲಪ್ರದೇಶದ ಪ್ರೇಮ್ ದೋರ್ಜೀ ಖ್ರಿಮೆ ಗುರುವಾರ ಇದ್ದಕ್ಕಿದ್ದಂತೆ ಕೋಟ್ಯಧಿಪತಿ ಆಗಿದ್ದಾರೆ. ಜನಪ್ರಿಯ ಟಿ.ವಿ. ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಅವರು ಭಾಗವಹಿಸಿಲ್ಲ. ಬದಲಾಗಿ 50 ವರ್ಷಗಳ ಹಿಂದೆ ಸ್ವಾಧೀನ ಪಡಿಸಿಕೊಂಡ ಅವರ ಕುಟುಂಬದ ಭೂಮಿಗೆ ಭಾರತೀಯ ಸೇನೆ ಗುರುವಾರ 6.31 ಕೋ. ರೂ. ಪರಿಹಾರ ಧನ ನೀಡಿದೆ.

 ಪಶ್ಚಿಮ ಕೆಮೆಂಗ್ ಜಿಲ್ಲೆಯ ತುಕ್‌ಪೇನ್ ಗ್ರಾಮದ ನಿವಾಸಿ ಪ್ರೇಮ್ ದೋರ್ಜೀ ಖ್ರಿಮೆ ಮಾತ್ರ ಕೋಟ್ಯಾದಿಪತಿ ಆಗಿರುವುದಲ್ಲ. ಇದೇ ಜಿಲ್ಲೆಯ ಸಿಂಗ್‌ಚುಂಗ್‌ನ ಫುಂಟ್ಸೊ ಖಾವಾ ಹಾಗೂ ಖಂಡು ಗ್ಲೋವ್ ಕೂಡ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಧಿಪತಿಯಾಗಿದ್ದಾರೆ. ಫುಂಟ್ಸೊಗೆ 6.21 ಕೋ. ರೂ. ಹಾಗೂ ಖಂಡುಗೆ 5.98 ಕೋ. ರೂ. ಪರಿಹಾರ ಧನವನ್ನು ಭಾರತೀಯ ಸೇನೆ ನೀಡಿದೆ.

‘‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರುಣಾಚಲ ಪ್ರದೇಶದ ಮೇಲೆ ಇದ್ದ ಪ್ರೀತಿಯಿಂದ ಈ ಪರಿಹಾರ ಧನ ದೊರಕಿದೆ’’ ಎಂದು ಮುಖ್ಯಮಂತ್ರಿ ಪ್ರೇಮಾ ಖಂಡು ಟ್ವೀಟ್ ಮಾಡಿದ್ದಾರೆ.

 ಈ ಎರಡು ಪ್ರದೇಶಗಳ ಇತರ ಹಲವರಿಗೆ ಗುರುವಾರ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮದಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೊಡ್ಡ ಮೊತ್ತದ ಪರಿಹಾರ ಧನ ವಿತರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರದ ಸಹಾಯಕ ಸಚಿವ ಕಿರಣ್ ರಿಜಿಜು ಕೂಡ ಪಾಲ್ಗೊಂಡಿದ್ದರು.

 ಸಿಂಗ್‌ಚುಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 5 ಗ್ರಾಮ ನಿವಾಸಿಗಳಿಗೆ ಒಟ್ಟು 24.56 ಕೋ. ರೂ. ಹಾಗೂ ತುಕ್‌ಪೆನ್‌ನ 7 ನಿವಾಸಿಗಳಿಗೆ 13.17 ಕೋ. ರೂ. ನೀಡಲಾಗಿದೆ ಎಂದು ಪಶ್ಚಿಮ ಕೆಮೆಂಗ್‌ನ ಉಪ ಆಯುಕ್ತ ಸೋನಾಲ್ ಸ್ವರೂಪ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News