×
Ad

'ಮೀ ಟೂ'ಗೆ ಇನ್ನೊಂದು ಸೇರ್ಪಡೆ: ಅರ್ಜುನ್ ಸರ್ಜಾ ಮೇಲೆ ಆರೋಪ ಹೊರಿಸಿದ ಶ್ರುತಿ ಹರಿಹರನ್

Update: 2018-10-20 15:13 IST

ಚೆನ್ನೈ,ಆ.20 : ‘ಮೀ ಟೂ’ ಆಂದೋಲನಕ್ಕೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಸೋಲೋ ಖ್ಯಾತಿಯ ಜನಪ್ರಿಯ ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಕನ್ನಡ ಚಿತ್ರ ‘ವಿಸ್ಮಯ'ದ ಚಿತ್ರೀಕರಣದ ರೊಮ್ಯಾಂಟಿಕ್ ದೃಶ್ಯದ ರಿಹರ್ಸಲ್ ವೇಳೆ  ಅರ್ಜುನ್ ತನ್ನನು ಅಪ್ಪಿಕೊಂಡು  ತನ್ನ ದೇಹದ ಮೇಲೆ ಕೈಯ್ಯಾಡಿಸಿದ್ದರು ಎಂದು ಶ್ರುತಿ ಆರೋಪಿಸಿದ್ದಾರೆ. ಈ ಬಗ್ಗೆ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

“ಚಿತ್ರರಂಗದ ನನ್ನ ಪಯಣದ ವೇಳೆ ಹಲವಾರು ಬಾರಿ ನನಗೆ ತೀವ್ರ ಅಸುರಕ್ಷತೆ ಮೂಡಿಸಿದ ಹಲವು ಘಟನೆಗಳು ನಡೆದಿದ್ದರೂ 2016ರಲ್ಲಿ ಅರ್ಜುನ್ ಸರ್ಜಾ ಅವರ ಜತೆ ದ್ವಿಭಾಷೆಯ ಚಿತ್ರ ವಿಸ್ಮಯ (ತಮಿಳಿನಲ್ಲಿ ನಿಬುನನ್) ಚಿತ್ರೀಕರಣದ ವೇಳೆ ಘಟನೆಯೊಂದು ನನಗೆ ಆಘಾತವುಮಟು ಮಾಡಿತ್ತು. ನಾನು ಬಾಲ್ಯದಿಂದಲೂ ನೋಡಿದ್ದ ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬನ ಜತೆ ನಟಿಸುವ ಬಗ್ಗೆ ಅತ್ಯುತ್ಸಾಹದಿಂದಿದ್ದೆ. ಚಿತ್ರದಲ್ಲಿ ನಾನು ಆತನ ಪತ್ನಿಯ ಪಾತ್ರ ನಿರ್ವಹಿಸುತ್ತಿದ್ದೆ. ಮೊದಲ ಕೆಲ ದಿನಗಳು ಎಲ್ಲವೂ ಚೆನ್ನಾಗಿತ್ತು. ನಂತರ ರೊಮ್ಯಾಂಟಿಕ್ ದೃಶ್ಯವೊಂದರ ಸಂದರ್ಭ ಸಣ್ಣ ಸಂಭಾಷಣೆಯ ನಂತರ ನಾವಿಬ್ಬರೂ ಪರಸ್ಪರ ಆಲಿಂಗಿಸಿಕೊಳ್ಳಬೇಕಿತ್ತು. ರಿಹರ್ಸಲ್ ಸಮಯ ಅರ್ಜುನ್ ನನ್ನನ್ನು ಆಲಂಗಿಸಿ ಯಾವುದೇ ಅನುಮತಿಯಿಲ್ಲದೆ ನನ್ನ  ಬೆನ್ನ ಮೇಲಿಂದ ಕೆಳಗೆ ಕೈಯ್ಯಾಡಿಸಿ ನನ್ನನ್ನು ಇನ್ನೂ ಹತ್ತಿರಕ್ಕೆಳೆದು ಈ ರೀತಿಯ ದೃಶ್ಯ ಸಿನೆಮಾದಲ್ಲಿ ಸೇರಿಸಬಹುದೇ ಎಂದು ನಿರ್ದೇಶಕರನ್ನು ಕೇಳಿದರು. ಆದರೆ ಇದು ನನಗೆ ಇಷ್ಟವಾಗಿಲ್ಲ ಎಂದು ನಿರ್ದೇಶಕರಿಗೆ ತಿಳಿಯಿತು. ಒಬ್ಬ ವೃತ್ತಿಪರ ನಟಿಯಾಗಿ ಚಿತ್ರದ ಚಿತ್ರೀಕರಣ ಮುಗಿಸಿದೆ ಆದರೆ ಈ ಸಮಯದುದ್ದಕ್ಕೂ  ಅವರ ವರ್ತನೆ ಹಿಡಿಸಿಲ್ಲ, ಕೆಲಸದ ನಂತರ ಅವರನ್ನು ಭೇಟಿಯಾಗುವಂತೆ ಅವರ ಆಹ್ವಾನ ನನಗೆ ಆಘಾತವುಂಟು ಮಾಡಿತ್ತು. ಮತ್ತೆ ಅವರು ಇಂತಹ ವರ್ತನೆಯನ್ನು ಬೇರೆ ನಟಿಯರ ಜತೆ ತೋರಿಸಿಕೊಳ್ಳದೇ ಇರಲಿ ಎಂಬ ಉದ್ದೇಶದಿಂದ ನಾನೀಗ ಇದನ್ನು ಹೇಳುತ್ತಿದ್ದೇನೆ ಎಂದು ಶ್ರುತಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಅರ್ಜುನ್ ಸರ್ಜಾ ಇನ್ನೂ ಪ್ರತಿಕ್ರಿಯಿಸದೇ ಇದ್ದರೂ ಚಿತ್ರದ ನಿರ್ದೇಶಕ ಸದ್ಯದಲ್ಲಿಯೇ ಹೇಳಿಕೆ ನೀಡಲಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News