ಶಬರಿಮಲೆ ವಿಚಾರದಲ್ಲಿ ಬಿಜೆಪಿ, ಆರೆಸ್ಸೆಸ್ಸಿನಿಂದ ಕೊಳಕು ರಾಜಕೀಯ: ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ

Update: 2018-10-20 10:35 GMT

ಮುಂಬೈ,ಅ.20 : ಬಿಜೆಪಿ ಮತ್ತು ಆರೆಸ್ಸೆಸ್ ಶಬರಿಮಲೆ ವಿಚಾರದಲ್ಲಿ ಕೊಳಕು ರಾಜಕೀಯದಲ್ಲಿ ತೊಡಗಿವೆ'' ಎಂದು  ಭೂಮಾತಾ ಬ್ರಿಗೇಡ್ ನಾಯಕಿ, 2016ರಲ್ಲಿ ಶತಮಾನಗಳ ಸಂಪ್ರದಾಯವನ್ನು ಮೀರಿ ಅಹ್ಮದ್ ನಗರದ ಶನಿ ಶಿಂಗ್ನಾಪುರ ದೇವಳದ ಗರ್ಭಗುಡಿ ಪ್ರವೇಶಿಸಲು ಯತ್ನಿಸಿ ಸುದ್ದಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.

“ಶಬರಿಮಲೆ ವಿಚಾರದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಬೆಂಕಿಗೆ ಇಂಧನ ಸುರಿಯುತ್ತಿವೆ. ಅವರಿಗೆ ಕೇರಳದಲ್ಲಿ ಎಡ ಪಕ್ಷವನ್ನು ಹೊರದಬ್ಬಿ ಅಧಿಕಾರ ಪಡೆಯಬೇಕಿದೆ. ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಅವರು ಹಿಂದು ಧರ್ಮದ ಗುತ್ತಿಗೆದಾರರಂತೆ ವರ್ತಿಸುತ್ತಿದ್ದಾರೆ. ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಲು ಅವರಿಗೆ ಯಾರು ಅಧಿಕಾರ ನೀಡಿದವರು?''ಎಂದು ತೃಪ್ತಿ ಪ್ರಶ್ನಿಸಿದರಲ್ಲದೆ ದೇವಳದ ಮುಖ್ಯ ಅರ್ಚಕರು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುವಂತಾಗಬೇಕು ಎಂದರು.

“ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಮಾತನಾಡುವ ಪ್ರಧಾನಿ ಹಿಂದು ಮಹಿಳೆಯರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಸೊಲ್ಲೆತ್ತುತ್ತಿಲ್ಲ” ಎಂದು ತೃಪ್ತಿ ಹೇಳಿದ್ದಾರೆ.

ಅವರ ಮೌನ ನಿರಾಶಾದಾಯಕ. ಅವರ ಪಕ್ಷದ ಸಿದ್ಧಾಂತವನ್ನು ಬೆಂಬಲಿಸುವ ಜನರು ಪತ್ರಕರ್ತೆಯರನ್ನು ನಿಂದಿಸಿ ಅವಮಾನಿಸಿರುವಾಗಲೂ ಅವರೇಕೆ ಮೌನವಾಗಿದ್ದಾರೆಂದು ನಾನು ಕೇಳಬಯಸುತ್ತೇನೆ,'' ಎಂದು ತೃಪ್ತಿ ಪ್ರಶ್ನಿಸಿದರು.

ಪ್ರಧಾನಿಯ ಶಿರ್ಡಿ ಭೇಟಿಯ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ತನ್ನನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು ``ಪೊಲೀಸರು ಫಡ್ನವಿಸ್ ಸರಕಾರದ ಅಣತಿಯಂತೆ ಈ ಕ್ರಮ ಕೈಗೊಂಡು ತನ್ನನ್ನು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು'' ಎಂದು ತೃಪ್ತಿ ದೂರಿದರು.

“ಪ್ರಧಾನಿ ತೆರಳಿದ ನಂತರವಷ್ಟೇ ನನ್ನನ್ನು ಬಿಡುಗಡೆಗೊಳಿಸಲಾಯಿತು ಮಹಿಳಾ ದನಿಗಳ ಬಗ್ಗೆ ಸರಕಾರವೇಕೆ ಇಷ್ಟು ಭಯಪಡುತ್ತಿದೆ?'' ಎಂದು ಅವರು ಪ್ರಶ್ನಿಸಿದರು.

“ಪ್ರಧಾನಿಯನ್ನು ಶಿರ್ಡಿಯಲ್ಲಿ ಭೇಟಿಯಾಗಿ ಶಬರಿಮಲೆ ವಿಚಾರದಲ್ಲಿ ಅವರು ಮಧ್ಯ ಪ್ರವೇಶಿಸಬೇಕೆಂದು ಕೋರಬೇಕೆಂದಿದ್ದೆ,'' ಎಂದು ತೃಪ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News