ಎಸ್‍ಐಗೆ ಕಪಾಳಮೋಕ್ಷಗೈದ ಬಿಜೆಪಿ ಕೌನ್ಸಿಲರ್ ಬಂಧನ

Update: 2018-10-20 12:08 GMT

ಮೀರತ್, ಅ. 20: ಮೀರತ್ ಜಿಲ್ಲೆಯ ಕಂಕರ್ಖೇಡ ಎಂಬಲ್ಲಿ ಶುಕ್ರವಾರ ಸಂಜೆ ನಡೆದ ಘಟನೆಯಲ್ಲಿ ಸ್ಥಳೀಯ ಬಿಜೆಪಿ ಕೌನ್ಸಿಲರ್ ಮನೀಶ್ ಕುಮಾರ್  ಅಲ್ಲಿನ ಎಸ್‍ಐ ಒಬ್ಬರ ಕೆನ್ನೆಗೆ ಹಲವಾರು ಬಾರಿ ಹೊಡೆದದ್ದೂ ಅಲ್ಲದೆ ಅವರನ್ನು ನಿಂದಿಸಿದ ಆರೋಪ ಎದುರಿಸುತ್ತಿದ್ದು, ಆರೋಪಿ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ. 

ಈ ಘಟನೆಯ ವೀಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿ ಸುಖಪಾಲ್ ವಕೀಲೆಯೊಬ್ಬರೊಂದಿಗೆ ಬಿಜೆಪಿ ನಾಯಕನ ರೆಸ್ಟಾರೆಂಟ್‍ಗೆ ಆಗಮಿಸಿದ್ದಾಗ ವಕೀಲೆ ಅಲ್ಲಿ ತಮಗೆ ವಿಳಂಬವಾಗಿ ಆಹಾರ ಪೂರೈಸಿದ್ದಕ್ಕೆ ಆಕ್ಷೇಪಿಸಿ ವೈಟರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರಿಬ್ಬರ ಜಗಳ ವಿಪರೀತಕ್ಕೆ ಹೋದಾಗ ಬಿಜೆಪಿ ನಾಯಕ ಮತ್ತು ಎಸ್‍ಐ ಇಬ್ಬರೂ ಮಧ್ಯ ಪ್ರವೇಶಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಬಿಜೆಪಿ ಕೌನ್ಸಿಲರ್ ಎಸ್‍ಐ ಕುತ್ತಿಗೆ ಹಿಡಿದು ಅವರ ಕೆನ್ನೆಗೆ ಹೊಡೆಯಲು ಆರಂಭಿಸಿದ್ದರು. ವೀಡಿಯೊದಲ್ಲಿ ಕಾಣಿಸುವಂತೆ ಬಿಜೆಪಿ ನಾಯಕ ಕನಿಷ್ಠ ಐದು ಬಾರಿ ಕಪಾಳಮೋಕ್ಷ ನಡೆಸಿದ ನಂತರ ಎಸ್‍ಐ ಕೆಳಕ್ಕೆ ಉರುಳಿದ್ದರು.

ನಂತರ ಎಸ್‍ಐ ಸುಖಪಾಲ್ ಅವರು ತಮ್ಮ ಪಿಸ್ತೂಲ್ ಹೊರ ತೆಗೆದು ಬೆದರಿಸಿದ್ದರೆಂದು ರೆಸ್ಟಾರೆಂಟ್ ಉದ್ಯೋಗಿಗಳು ಆರೋಪಿಸಿದ್ದಾರೆ. ಎಸ್‍ಐ ತನ್ನ ಕರ್ತವ್ಯವನ್ನು ಬದಿಗಿರಿಸಿ ರೆಸ್ಟಾರೆಂಟ್‍ಗೆ ತೆರಳಿದ್ದರಿಂದ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಮೀರತ್ ಎಸ್‍ಪಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News