ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ: ರೈಲ್ವೆ

Update: 2018-10-20 16:08 GMT

ಅಮೃತಸರ, ಅ.20: ರಾವಣ ದಹನ ವೀಕ್ಷಿಸಲು ಜನರು ರೈಲು ಹಳಿಯ ಮೇಲೆ ಜಮಾಯಿಸಿರುವುದು ಸ್ಪಷ್ಟವಾಗಿ ಅತಿಕ್ರಮಣ. ಈ ಕಾರ್ಯಕ್ರಮಕ್ಕೆ ರೈಲ್ವೆ ಯಾವುದೇ ಅನುಮತಿ ನೀಡಿಲ್ಲ ಎಂದು ರೈಲ್ವೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ದಸರಾ ಕಾರ್ಯಕ್ರಮದ ಬಗ್ಗೆ ಸ್ಥಳೀಯಾಡಳಿತಕ್ಕೆ ತಿಳಿದಿತ್ತು. ಹಿರಿಯ ಸಚಿವರ ಪತ್ನಿ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದ್ದಾರೆ. ‘‘ನಾವು ಈ ಕಾರ್ಯಕ್ರಮಕ್ಕೆ ಪರವಾನಿಗೆ ನೀಡಿಲ್ಲ. ಇದು ಸ್ಪಷ್ಟವಾಗಿ ಅತಿಕ್ರಮಣ ಪ್ರಕರಣ. ಇದರ ಹೊಣೆಯನ್ನು ಸ್ಥಳೀಯಾಡಳಿತ ಹೊರಬೇಕು’’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಚಾಲಕನ ಬಂಧನ

60ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ರೈಲಿನ ಚಾಲಕನನ್ನು ಪಂಜಾಬ್ ಹಾಗೂ ರೈಲ್ವೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ತನಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ರೈಲ್ವೆ ಹಳಿ ಮೇಲೆ ನೂರಾರು ಜನರು ಇರುವ ಬಗ್ಗೆ ಬಗ್ಗೆ ನನಗೆ ಗೊತ್ತೇ ಇರಲಿಲ್ಲ ಎಂದು ರೈಲು ಚಾಲಕ ವಿಚಾರಣೆ ವೇಳೆ ತಿಳಿಸಿದ್ದಾರೆ. ರೈಲ್ವೆ ಹಳಿಯಲ್ಲಿ ನೂರಾರು ಜನರಿರುವ ಬಗ್ಗೆ ಮಾಹಿತಿ ನೀಡಲು ವಿಫಲವಾದ ಜೋರಾ ಫಾಟಕ್ ಸಮೀಪದ ಹಳಿಗಳಲ್ಲಿ ನಿಯೋಜಿಸಲಾದ ಲೈನ್‌ಮ್ಯಾನ್‌ಗಳಿಂದ ಮಾಹಿತಿ ಕಲೆ ಹಾಕಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಆದೇಶ

ದುರಂತದ ಕುರಿತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ದುರಂತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಸಂತ್ರಸ್ತರನ್ನು ಮುಖ್ಯಮಂತ್ರಿ ಅವರು ಭೇಟಿಯಾಗಿದ್ದಾರೆ ಹಾಗೂ ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News