ಮಲ್ಯರ ವಿಲಾಸಿ ಕಾರುಗಳನ್ನು ಹರಾಜು ಹಾಕಲು ಸಿದ್ಧತೆ

Update: 2018-10-20 17:26 GMT

ಲಂಡನ್, ಅ. 20: ಭಾರತೀಯ ಬ್ಯಾಂಕ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಲಂಡನ್‌ಗೆ ಪರಾರಿಯಾಗಿರುವ ಮಾಜಿ ಉದ್ಯಮಿ ವಿಜಯ ಮಲ್ಯರಿಂದ ಸಾಲ ವಸೂಲು ಮಾಡುವ ಪ್ರಯತ್ನವಾಗಿ ಅವರ ವಿಲಾಸಿ ಕಾರುಗಳನ್ನು ಹರಾಜು ಹಾಕಲು ಸಿದ್ಧತೆಗಳು ನಡೆದಿವೆ ಎಂದು ಅವರಿಗೆ ಸಾಲ ನೀಡಿರುವ 13 ಬ್ಯಾಂಕ್‌ಗಳ ಒಕ್ಕೂಟದ ಕಾನೂನು ಪ್ರತಿನಿಧಿಯೊಬ್ಬರು ಶುಕ್ರವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ತಲೆಮರೆಸಿಕೊಂಡಿರುವ ವಿಜಯ ಮಲ್ಯ 13 ಭಾರತೀಯ ಬ್ಯಾಂಕ್‌ಗಳಿಗೆ 10,000 ಕೋಟಿ ರೂಪಾಯಿಗೂ ಅಧಿಕ ಮೊತ್ತವ್ನನು ಪಾವತಿಸಬೇಕಾಗಿದೆ.

ಕಳೆದ ವಾರ ವಾಣಿಜ್ಯ ನ್ಯಾಯಾಲಯವೊಂದರ ಕ್ವೀನ್ಸ್ ಬೆಂಚ್ ವಿಭಾಗವು, ಆರು ವಿಲಾಸಿ ಕಾರುಗಳನ್ನು ಮಾರಾಟ ಮಾಡಲು ಹೈಕೋರ್ಟ್‌ನ ಜಾರಿ ಅಧಿಕಾರಿಗೆ ಅಧಿಕಾರ ನೀಡುವ ಆದೇಶವೊಂದನ್ನು ಹೊರಡಿಸಿತ್ತು.

ಒಂದು ರೇಂಜ್ ರೋವರ್, 2 ಫೆರಾರಿ, ಒಂದು ಪೋರ್ಶ್ ಕಯೇನ್, ಒಂದು ಮಿನಿ ಕಂಟ್ರಿಮ್ಯಾನ್ ಮತ್ತು ಒಂದು ಮೇಬ್ಯಾಕ್ 62 ಕಾರುಗಳನ್ನು ಕನಿಷ್ಠ 4,04,000 ಪೌಂಡ್ (ಸುಮಾರು 3.88 ಕೋಟಿ ರೂಪಾಯಿ)ಗೆ (ತೆರಿಗೆ ಪ್ರತ್ಯೇಕ) ಮಾರಾಟ ಮಾಡಬೇಕಾಗಿದೆ ಎಂದು ‘ದ ಹಿಂದೂ ಬಿಝ್ನೆಸ್‌ಲೈನ್’ ವರದಿ ಮಾಡಿದೆ.

ಕೆಲವು ಕಾರುಗಳಲ್ಲಿ ಅವರ ಹೆಸರಿನ ಮೊದಲಾಕ್ಷರಗಳಾದ ‘ವಿಜೆಎಂ’ಗಳನ್ನು ಒಳಗೊಂಡ ವ್ಯಕ್ತಿಗತ ನಂಬರ್ ಪ್ಲೇಟ್‌ಗಳಿವೆ.

‘‘ಹೈಕೋರ್ಟ್ ಜಾರಿ ಅಧಿಕಾರಿ ಬ್ಯಾಂಕ್‌ಗಳ ಸೂಚನೆಯಂತೆ ವಿಜಯ ಮಲ್ಯರ ಕಾರುಗಳನ್ನು ಸುಪರ್ದಿಗೆ ಪಡೆದು ಹರಾಜು ಹಾಕಲು ಮುಂದಾಗಿದ್ದಾರೆ ಎಂಬುದನ್ನು ನಾವು ಖಚಿತಪಡಿಸಬಲ್ಲೆವು’’ ಎಂದು ಬ್ಯಾಂಕ್‌ಗಳ ಪರವಾಗಿ ಮೊಕದ್ದಮೆ ನಡೆಸುತ್ತಿರುವ ಕಾನೂನು ಸಂಸ್ಥೆ ‘ಟಿಎಲ್‌ಟಿ’ಯ ಪಾಲುದಾರ ಪೌಲ್ ಗೇರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News