‘ದಿ ವಿಲನ್’: ದಾರಿ ತಪ್ಪಿದ ಮಕ್ಕಳು!

Update: 2018-10-21 09:41 GMT

ಎರಡು ವರ್ಷಗಳ ಪ್ರೇಕ್ಷಕರ ಕಾಯುವಿಕೆಗೆ ‘ದಿ ವಿಲನ್’ ಉತ್ತರ ನೀಡಿದೆ. ಚಿತ್ರ ಭರ್ಜರಿ ಪ್ರದರ್ಶನ ಆರಂಭಗೊಂಡಿದೆ.

 ಹಳ್ಳಿಯ ದೃಶ್ಯದಿಂದ ಆರಂಭವಾಗುವ ಸಿನೆಮಾ ಮೊದಲ ದೃಶ್ಯದಿಂದಲೇ ಪ್ರೇಕ್ಷಕರನ್ನು ಚಿತ್ರದೊಳಗೆ ಸೆಳೆದುಕೊಳ್ಳುತ್ತದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹಳ್ಳಿಯ ನಾಟಕದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿದ್ದಂಥ ಕಲಾವಿದನ ಪಾತ್ರದೊಂದಿಗೆ ಕತೆ ಆರಂಭವಾಗುತ್ತದೆ. ಆದರೆ ಆ ರಾವಣ ಪಾತ್ರಧಾರಿಯ ಪತ್ನಿ ರಾಮಭಕ್ತೆ. ಪತಿ ರಂಗದ ಮೇಲೆಯೂ ರಾವಣನಾಗಿರುವುದನ್ನು ಇಷ್ಟಪಡದೆ ಆತನನ್ನು ತೊರೆದು ಹೋಗುತ್ತಾಳೆ. ಆ ಬಳಿಕ ಚಿತ್ರದಲ್ಲಿ ತಾಯಿ ಇಲ್ಲದೆ ಬೆಳೆದ ಇಬ್ಬರು ಮಕ್ಕಳ ಕತೆಯನ್ನು ಹೇಳಲಾಗುತ್ತದೆ. ಅದರಲ್ಲಿ ಒಬ್ಬಾತ ಹಳ್ಳಿಯ ನಾಟಕದಲ್ಲಿ ರಾಮನ ಪಾತ್ರ ನಿರ್ವಹಿಸುವ ವ್ಯಕ್ತಿ. ಆತ ರಂಗದ ಮೇಲೆ ರಾಮನಾದರೂ ಪರದೆ ಹಿಂದೆ ಇಸ್ಪೀಟು ಆಟದ ಚಾಳಿ ಇರುವ, ಹಣಕ್ಕಾಗಿ ಆಸೆ ಪಡುವ ವ್ಯಕ್ತಿತ್ವ ಹೊಂದಿದಾತ. ಇನ್ನೊಬ್ಬ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಶಸ್ತ್ರಾಸ್ತ್ರ ಮಾರಾಟಗಾರನಾಗಿ, ಡಾನ್ ಆಗಿ ಗುರುತಿಸಿಕೊಂಡಾತ. ಇವರಿಬ್ಬರಲ್ಲಿ ಆ ತಾಯಿಯ ನಿಜವಾದ ಮಗ ಯಾರು ಎನ್ನುವುದನ್ನು ತಿಳಿಯಬೇಕಾದರೆ ನೀವು ಚಿತ್ರ ಮಂದಿರಕ್ಕೇ ಹೋಗಬೇಕು. ಆದರೆ ಸಿನೆಮಾ ನೋಡಿದ ಮೇಲೆಯೂ ನಿಮಗೆ ನಿಜವಾದ ಮಗ ಯಾರು ಎಂದು ತಿಳಿಯದೇ ಹೋದರೂ ಅಚ್ಚರಿಯಿಲ್ಲ. ಯಾಕೆಂದರೆ ಚಿತ್ರಕತೆಯನ್ನು ಬೇಕೆಂದೇ ಒಂದಷ್ಟು ಗೊಂದಲದ ಗೂಡಾಗಿಸಿದ್ದಾರೆ ಪ್ರೇಮ್.

 ‘ದಿ ವಿಲನ್’ ಚಿತ್ರದಲ್ಲಿ ವಿಲನ್ ಯಾರು ಎನ್ನುವುದು ಎಲ್ಲರ ಪ್ರಶ್ನೆ. ಇಬ್ಬರು ನಾಯಕರಲ್ಲಿ ಹೆಚ್ಚು ಅಪಾಯಕಾರಿ ಯಾರು ಎನ್ನುವ ಮೂಲಕ ಅದನ್ನು ನಿರ್ಧರಿಸುವುದಾದರೆ ವಿಲನ್ ಸುದೀಪ್ ಎಂದೇ ಹೇಳಬಹುದು. ಆ ಕಾರಣದಿಂದಲೇ ಇಬ್ಬರು ಸ್ಟಾರ್‌ಗಳ ಚಿತ್ರವಾದರೂ ಸುದೀಪ್ ಅವರು ನಿರ್ವಹಿಸಿದ ಕೈಸರ್ ರಾಮ್ ಪಾತ್ರ ತುಸು ಹೆಚ್ಚಾಗಿಯೇ ಗಮನ ಸೆಳೆಯುತ್ತದೆ. ‘ಮುಕುಂದ ಮುರಾರಿ’ ಚಿತ್ರದಲ್ಲಿ ಗಮನ ಸೆಳೆದಂಥ ಅವರ ಕಾಸ್ಟ್ಯೂಮ್ ಶೈಲಿ, ಸ್ಟೈಲಿಷ್ ಲುಕ್ ಇಲ್ಲಿ ಇನ್ನೂ ಒಂದು ಹೆಜ್ಜೆ ಮುಂದುವರಿದಿದೆ. ನಾಟಕದ ಹುಡುಗಿಯಲ್ಲಿ ತನ್ನ ಸಂಭಾಷಣೆಯ ಮೂಲಕವಂತೂ ಒಂದೊಮ್ಮೆ ಪೌರಾಣಿಕ ಪಾತ್ರ ಸಿಕ್ಕರೂ ಕೂಡ ತಾನು ಚೆನ್ನಾಗಿ ನಿಭಾಯಿಸಬಲ್ಲೆ ಎಂದು ಸಾಬೀತು ಪಡಿಸಿದ್ದಾರೆ.

ಕಾರಿನೊಳಗೆ ಕುಳಿತು ಖಳ ಪಾತ್ರಧಾರಿ ಮೇಕ ಶ್ರೀಕಾಂತ್‌ಗೆ ಪುಣ್ಯಕೋಟಿಯ ಕತೆ ಹೇಳುವ ದೃಶ್ಯವೂ ಅಮೋಘ. ಆದರೆ ಸುದೀಪ್‌ರಿಂದ ಚಿತ್ರದಲ್ಲಿ ತುಸು ಹೆಚ್ಚೇ ಕತೆ ಹೇಳಿಸಲಾಯಿತೇನೋ ಎಂಬ ಸಂದೇಹವೂ ಕಾಡದಿರದು! ಒಟ್ಟಿನಲ್ಲಿ ಫೈಟು, ಸಾಂಗು ಸೇರಿದಂತೆ ಚಿತ್ರದಲ್ಲಿ ಕಿಚ್ಚ ಫುಲ್ ಸ್ಕೋರ್ ಮಾಡಿದ್ದಾರೆ. ಹಾಡೊಂದರಲ್ಲಿ ರಣವೀರ್‌ನ ‘ಕಲೀ ಬಲೀ’ ಮಾದರಿಯ ಸ್ಟೆಪ್ ಕೂಡ ಗಮನ ಸೆಳೆಯುತ್ತದೆ.

ಮತ್ತೋರ್ವ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದಲ್ಲಿ ಹಳ್ಳಿಯಿಂದ ವಿದೇಶದ ತನಕ ಪ್ರಯಾಣ ಬೆಳೆಸುತ್ತಾರೆ. ಆದರೆ ಅವರ ಹಳ್ಳಿಯ ಶೈಲಿ ಹೆಚ್ಚು ಬದಲಾಗುವುದಿಲ್ಲ. ಚಿತ್ರ ಆರಂಭಗೊಂಡ ಹತ್ತೇ ನಿಮಿಷದಲ್ಲಿ ಅದ್ಭುತವಾದ ಇಂಟ್ರಡಕ್ಷನ್ ದೃಶ್ಯ ಶಿವಣ್ಣನಿಗೆ ನೀಡಲಾಗಿದೆ. ಆದರೆ ಅದರ ಬಳಿಕ ಸುದೀಪ್ ಜೊತೆಗೆ ಕಾಂಬಿನೇಶನ್‌ಗೆ ಬರಲು ಮಧ್ಯಂತರ ದಾಟುವ ತನಕ ಕಾಯಬೇಕಾಗುತ್ತದೆ.

ಎರಡು ಗೆಟಪ್‌ಗಳಲ್ಲಿ ಕಾಣಿಸಿರುವ ನಾಯಕಿ ಆ್ಯಮಿ ಜಾಕ್ಸನ್ ಎರಡಕ್ಕೂ ಹೊಂದುವ ಹಾಗೆ ಅದ್ಭುತವಾಗಿ ನಟಿಸಿದ್ದಾರೆ. ಅವರ ನಟನೆಯನ್ನು ಇಷ್ಟಗೊಳಿಸುವಲ್ಲಿ ರಕ್ಷಿತಾ ಪ್ರೇಮ್ ನೀಡಿರುವ ಕಂಠದ ಪಾತ್ರವೂ ಪ್ರಮುಖ.

ಚಿತ್ರದ ಹಾಡುಗಳಲ್ಲಿನ ಗ್ರಾಫಿಕ್ಸ್, ಸುದೀಪ್ ನೀಡಲಾಗಿರುವ ಬಿಲ್ಡಪ್‌ಗಳು ಎಲ್ಲವೂ ಆಕರ್ಷಕವೇ. ಆದರೆ ಅವುಗಳಲ್ಲಿ ಯಾವುದಕ್ಕಾದರೂ ಸ್ವಲ್ಪಕತ್ತರಿ ಹಾಕಿದ್ದರೆ ಕಡೆಯಲ್ಲಿ ತಾಯಿ ಸೆಂಟಿಮೆಂಟ್ ಧುತ್ತನೆ ಎದುರಾಗುವಂತಿರುತ್ತಿರಲಿಲ್ಲ. ಪೋಷಕ ಕಲಾವಿದರ ಸಂಭಾಷಣೆಯಲ್ಲಿ ಒಂದೆಡೆ ಅಶ್ಲೀಲತೆಗಳಿದ್ದರೂ ಹಲವೆಡೆ ತಮ್ಮ ಅರ್ಥಗರ್ಭಿತ ಡೈಲಾಗ್‌ಗಳ ಮೂಲಕ ಗಮನ ಸೆಳೆದಿದ್ದಾರೆ ಮಳವಳ್ಳಿ ಸಾಯಿಕೃಷ್ಣ. ಅರ್ಜುನ್ ಜನ್ಯ ಸಂಗೀತ ಕೂಡ ಆಕರ್ಷಕ.

ಒಟ್ಟಿನಲ್ಲಿ ದಾರಿ ತಪ್ಪಿದ ಮಗನೊಬ್ಬ ವಿಲನ್ ಆಗಿದ್ದರೆ ಆತನನ್ನು ತಾಯಿ ಜೊತೆಗೆ ಸೇರಿಸುವ ಮತ್ತೊಬ್ಬ ‘ಹೀರೋ’ ಆಗಿದ್ದಾರೆ. ಆದರೆ ಪಾತ್ರಗಳಲ್ಲಿ ಸ್ಟಾರ್ ಪವರ್ ಹುಡುಕಲು ಹೋದ ಪ್ರೇಕ್ಷಕರು ಮಾತ್ರ ದಾರಿ ತಪ್ಪುವುದು ಖಚಿತ.

ತಾರಾಗಣ: ಶಿವರಾಜ್ ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್
ನಿರ್ದೇಶನ: ಪ್ರೇಮ್
ನಿರ್ಮಾಣ: ಸಿ.ಆರ್. ಮನೋಹರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News