ಬಾಕ್ಸ್ ಆಫೀಸ್ ನಲ್ಲಿ ಗರ್ಜಿಸಿದ ಕೊಚ್ಚುಣ್ಣಿ

Update: 2018-10-21 06:30 GMT

ನಿವಿನ್‌ಪೋಲಿ ಹಾಗೂ ಮೋಹನ್‌ಲಾಲ್ ಅಭಿನಯದ ಕಾಯಂಕುಳಂ ಕೊಚ್ಚುಣ್ಣಿ, ಬಾಕ್ಸ್ ಆಫೀಸ್‌ನಲ್ಲಿ ಜೋರಾಗಿಯೇ ಸದ್ದುಮಾಡುತ್ತಿದೆ.ಈ ವರ್ಷದ ದಕ್ಷಿಣಭಾರತದ ಯಾವುದೇ ಚಿತ್ರವು ಮಾಡಿರದಂತಹ ದಾಖಲೆಯನ್ನು ಕೊಚ್ಚುಣ್ಣಿ ನಿರ್ಮಿಸಿದೆ. ಯುಎಇನಲ್ಲಿ ಕೇವಲ ಮೂರು ದಿನದಲ್ಲಿ 6.56 ಕೋಟಿ ರೂ. ಸಂಪಾದಿಸುವ ಮೂಲಕ 2018ರಲ್ಲಿ ಆ ದೇಶದಲ್ಲಿ ಗರಿಷ್ಠ ಗಳಿಕೆ ಕಂಡ ದಕ್ಷಿಣ ಭಾರತದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇತ್ತ ಕೇರಳದಲ್ಲೂ ಕೊಚ್ಚುಣ್ಣಿ ಜಯಭೇರಿ ಬಾರಿಸಿದ್ದಾನೆ. ಬಿಡುಗಡೆಯಾದ ಕೇವಲ ನಾಲ್ಕೇ ದಿನ ಗಳೊಳಗೆ ಚಿತ್ರವು 35 ಕೋಟಿ ರೂ. ಗಳಿಸಿದೆಯೆಂದು ನಿರ್ಮಾಪಕರು ಘೋಷಿಸಿದ್ದಾರೆ. ನಟ ನಿವಿನ್ ಪೋಲಿಯ ಚಿತ್ರಬದುಕಿನಲ್ಲಿಯೂ ಕೊಚ್ಚುಣ್ಣಿಯು ಒಂದು ದೊಡ್ಡ ಮೈಲುಗಲ್ಲಾಗಿದೆ. 45 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರವು ಅಕ್ಟೋಬರ್ 11ರಂದು ಬಿಡುಗಡೆ ಯಾಗಿದ್ದು, ಒಂದೇ ದಿನದಲ್ಲಿ 5 ಕೋಟಿ ರೂ. ಗಳಿಸಿತ್ತು. ಕೊಚ್ಚುಣ್ಣಿ ಯ ಗಳಿಕೆಯ ನಾಗಾಲೋಟ ಇದೇ ರೀತಿ ಮುಂದುವರಿದಲ್ಲಿ ಚಿತ್ರವು 100 ಕೋಟಿ ರೂ. ಕ್ಲಬ್‌ಗೆ ಸೇರುವ ದಿನಗಳು ದೂರವಿಲ್ಲವೆಂದು ಬಾಕ್ಸ್‌ಆಫೀಸ್ ವಿಶ್ಲೇಷಕರು ಅಭಿಪ್ರಾಯಿಸುತ್ತಾರೆ.

ರೋಶನ್ ಆ್ಯಂಡ್ರೂಸ್ ನಿರ್ದೇಶನದ ಈ ಚಿತ್ರವು 19ರ ಶತಮಾನದಲ್ಲಿ ತಿರುವಾಂಕೂರು ಪ್ರದೇಶದ ದರೋಡೆಕೋರ ಕೊಚ್ಚುಣ್ಣಿಯ ಬದುಕಿನ ಕಥೆಯನ್ನಾಧರಿಸಿದೆ. ಲಾಭಕೋರ ಶ್ರೀಮಂತರಿಂದ ಧನಸಂಪತ್ತನ್ನು ದರೋಡೆ ಮಾಡಿ ಬಡವರಿಗೆ ಹಂಚುತ್ತಿದ್ದ ಕೊಚ್ಚುಣ್ಣಿ ಯನ್ನು ಕೇರಳದ ರಾಬಿನ್‌ಹುಡ್ ಎನ್ನಲಾಗುತ್ತಿದೆ. ಖ್ಯಾತ ನಟ ಮೋಹನ್‌ಲಾಲ್ ಚಿತ್ರದಲ್ಲಿ ಕೊಚ್ಚುಣ್ಣಿಯ ಮಾರ್ಗದರ್ಶ ಇತಿಕ್ಕಾರ ಪಕ್ಕಿ ಎಂಬಾತನ ಪಾತ್ರವನ್ನು ನಿರ್ವಹಿಸಿದ್ದಾರೆ. ನಿವಿನ್‌ಪೊಲಿ ಕೊಚ್ಚುಣ್ಣಿಯಾಗಿ ನಟಿಸಿರುವ ಈ ಚಿತ್ರದ ಬಹುತೇಕ ದೃಶ್ಯಗಳು ಮಂಜೇಶ್ವರ ಸೇರಿದಂತೆ ಗಡಿನಾಡು ಕಾಸರಗೋಡು ಜಿಲ್ಲೆಯ ವಿವಿಧೆಡೆ ಚಿತ್ರೀಕರಿಸಲ್ಪಟ್ಟಿದೆ. ಪ್ರಿಯಾಂಕಾ ತಿಮ್ಮೇಶ್, ಪ್ರಿಯಾ ಆನಂದ್, ಬಾಬು ಆ್ಯಂಟನಿ ಹಾಗೂ ಸುನ್ನಿ ವಾಯ್ನೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News