ಹೌಸ್‌ಫುಲ್4ಗೆ ಮೀಟೂ ಕಾಟ

Update: 2018-10-21 06:37 GMT

ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ‘ಮೀ ಟೂ’ ಚಳವಳಿಯ ನೇರ ಬಿಸಿ ಮೊದಲಿಗೆ ತಟ್ಟಿರುವುದು ‘ಹೌಸ್‌ಫುಲ್ 4’ ಚಿತ್ರಕ್ಕೆ. ಚಿತ್ರದ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದರಿಂದ, ಅವರು ಚಿತ್ರದಿಂದ ಹೊರಬಂದಿದ್ದಾರೆ. ಇದೀಗ ‘ಹೌಸ್‌ಫುಲ್4’ಗೆ, ಕಥಾಲೇಖಕ ಫಾರ್ಹದ್ ಸಾಮ್ಜಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಾನಾಪಾಟೇಕರ್ ವಿರುದ್ಧ ನಟಿ ತನುಶ್ರೀದತ್ತಾ, ಕೆಲವು ವಾರಗಳ ಹಿಂದೆ ಲೈಂಗಿಕ ಪೀಡನೆಯ ಆರೋಪಗಳನ್ನು ಮಾಡಿದ ಬಳಿಕ ಭಾರತಾದ್ಯಂತ ಮೀಟೂ ಚಳವಳಿಯ ಕಿಡಿ ಹತ್ತಿ ಕೊಂಡಿತ್ತು. ‘ಹೌಸ್‌ಫುಲ್ 4’ ಚಿತ್ರದಲ್ಲಿ ನಾನಾಪಾಟೇಕರ್ ಅವರು ಮುಖೇಶ್ ಕಪೂರ್ ಎಂಬ ಹೆಸರಿನ ಮುಖ್ಯಪಾತ್ರವೊಂದರಲ್ಲಿ ನಟಿಸಲಿದ್ದರು. ಆದರೆ ತನುಶ್ರೀ ಆರೋಪದ ಹಿನ್ನೆಲೆಯಲ್ಲಿ ಉಂಟಾಗಿರುವ ಒತ್ತಡದಿಂದಾಗಿ ಅವರು ಚಿತ್ರದಿಂದ ನಿರ್ಗಮಿಸಿದ್ದಾರೆ. ಅವರ ಬದಲಿಗೆ ಸಂಜಯ್ ದತ್ ಅಥವಾ ಅನಿಲ್ ಕಪೂರ್ ಅವರನ್ನು ತರುವ ಯೋಚನೆಯನ್ನು ನಿರ್ದೇಶಕರು ಹೊಂದಿದ್ದಾರೆ.

ಇದೀಗ ನಾನಾ ಪಾಟೇಕರ್ ಚಿತ್ರದಿಂದ ಹೊರನಡೆದಿರುವ ಪರಿಣಾಮವಾಗಿ, ಸುಮಾರು 6 ದಿನಗಳ ಚಿತ್ರೀಕರಣವನ್ನು ರೀಶೂಟ್ ಮಾಡಬೇಕಾಗಿ ಬಂದಿದೆ.

2008ರಲ್ಲಿ ಹಾರ್ನ್ ಓಕೆ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತನ್ನ ಜೊತೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರೆಂದು ‘ಅಶಿಕ್ ಬನಾಯಾ ಅಪ್ನೇ’ಖ್ಯಾತಿಯ ನಟಿ ತನುಶ್ರೀ ದತ್ತಾ ಕಳೆದ ತಿಂಗಳು ಆರೋಪಿಸಿದ್ದರು. ಈ ನಡುವೆ ನಾನಾಪಾಟೇಕರ್ ವಿರುದ್ಧದ ಆರೋಪಗಳ ತನಿಖೆ ಪೂರ್ಣಗೊಳ್ಳುವ ತನಕ ತಾನು ಕೂಡಾ ಹೌಸ್‌ಫುಲ್ 4 ಚಿತ್ರದಲ್ಲಿ ನಟಿಸುವುದಿಲ್ಲವೆಂದು ನಾಯಕ ನಟ ಅಕ್ಷಯ್ ಕುಮಾರ್ ಘೋಷಿಸಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳಿಂದ ಪಕ್ಕಾ ಕಾಮಿಡಿ ಚಿತ್ರವಾದ ಹೌಸ್‌ಫುಲ್ 4ನ ಭವಿಷ್ಯ ಸದ್ಯಕ್ಕೆ ಟ್ರಾಜಡಿಯಾಗಿ ಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News