ತ್ರಿಪುರಾದಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸಕ್ಕಾಗಿ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಸಿಪಿಎಂ

Update: 2018-10-21 14:34 GMT

 ಅಗರ್ತಲಾ.ಅ.21: ಅರಣ್ಯನಾಶದ ವಿರುದ್ಧ ಹೋರಾಟದಲ್ಲಿ ಹುತಾತ್ಮ ಮಹಿಳೆಯ ಸ್ಮರಣಾರ್ಥ ತಾನು ಕಳೆದ ವರ್ಷ ಫಲಕವೊಂದನ್ನು ಸ್ಥಾಪಿಸಿದ್ದ ದಕ್ಷಿಣ ತ್ರಿಪುರಾ ಜಿಲ್ಲೆಯ ಬುಡಕಟ್ಟು ವಸತಿ ಪ್ರದೇಶ ಮತಾಯಿಯಲ್ಲಿನ ನಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನೆರವೇರಿಸಿರುವುದಕ್ಕಾಗಿ ಆಡಳಿತ ಬಿಜೆಪಿ ಮತ್ತು ಸನಾತನ ಸೇನಾ ವಿರುದ್ಧ ಪ್ರತಿಪಕ್ಷ ಸಿಪಿಎಂ ಪೊಲೀಸ್ ದೂರನ್ನು ದಾಖಲಿಸಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ದ.ತ್ರಿಪುರಾ ಎಸ್‌ಪಿ ಜಾಲಸಿಂಗ್ ಮೀನಾ ಅವರು ಸುದ್ದಿಗಾರರಿಗೆ ತಿಳಿಸಿದರು.

 ‘ಜುಮ್ ಕೃಷಿ’ ಅಥವಾ ಅರಣ್ಯವನ್ನು ಸುಟ್ಟು ಕೃಷಿ ನಡೆಸುವುದನ್ನು ವಿರೋಧಿಸಿದ್ದ ಮತ್ತು 1967ರಲ್ಲಿ ಆಗಿನ ಕಾಂಗ್ರೆಸ್ ಸರಕಾರದ ವಿರುದ್ಧದ ಚಳವಳಿ ಸಂದರ್ಭ ಹುತಾತ್ಮರಾಗಿದ್ದ ಮೋಹಿನಿ ತ್ರಿಪುರಾ ಅವರ ಸ್ಮರಣಾರ್ಥ ಸಿಪಿಎಂ 2017ರಲ್ಲಿ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಈ ಫಲಕವನ್ನು ಸ್ಥಾಪಿಸಿತ್ತು ಎಂದು ತಿಳಿಸಿದ ಸಿಪಿಎಂ ದ.ತ್ರಿಪುರಾ ಕಾರ್ಯದರ್ಶಿ ತಪಸ್ ದತ್ತಾ ಅವರು,ಖಾಸಗಿ ಜಾಗದಲ್ಲಿದ್ದ ಈ ಫಲಕವನ್ನು ಸನಾತನ ಸೇನಾ ಮತ್ತು ಬಿಜೆಪಿ ಕಾರ್ಯಕರ್ತರು ಕಿತ್ತೆಸೆದಿದ್ದಾರೆ. ಇದು ತ್ರಿಪುರಾದಲ್ಲಿ ಎಡರಂಗದ ಆಂದೋಲನದ ಇತಿಹಾಸವನ್ನು ಅಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಜಾಗದ ಮಾಲಿಕ ಅದನ್ನು ಸಿಪಿಎಂ ಪಕ್ಷಕ್ಕೆ ಕೊಡುಗೆಯಾಗಿ ನೀಡಲು ಹಿಂದೆ ಒಪ್ಪಿಕೊಂಡಿದ್ದಿರಬಹುದು,ಆದರೆ ನಂತರ ಮನಸ್ಸು ಬದಲಾಯಿಸಿ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಲು ನಿರ್ಧರಿಸಿರಬಹುದು ಎಂದು ಮೀನಾ ಹೇಳಿದರು. ಸಿಪಿಎಂ ಕಾರ್ಯಕರ್ತರು ತಮ್ಮ ಸ್ಮಾರಕ ನಿರ್ಮಾಣಕ್ಕಾಗಿ ನಿವೇಶನವನ್ನು ಸ್ಥಳೀಯ ವ್ಯಕ್ತಿಯಿಂದ ಬಲವಂತದಿಂದ ವಶಪಡಿಸಿಕೊಂಡಿದ್ದರು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಸುಬಾಲ್ ಭೌಮಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News