ವಿಪತ್ತು ಪರಿಹಾರ ಕಾರ್ಯಕರ್ತರಿಗೆ ನೇತಾಜಿ ಹೆಸರಿನಲ್ಲಿ ರಾಷ್ಟ್ರಪ್ರಶಸ್ತಿ: ಪ್ರಧಾನಿ ಘೋಷಣೆ

Update: 2018-10-21 15:36 GMT

ಹೊಸದಿಲ್ಲಿ,ಅ.21: ಯಾವುದೇ ವಿಪತ್ತಿನ ಸಂದರ್ಭದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಪ್ರತಿ ವರ್ಷ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹೆಸರಿನಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಇಲ್ಲಿ ಪ್ರಕಟಿಸಿದರು.

1943,ಅ.21ರಂದು ಭಾರತದ ಮೊದಲ ಸ್ವತಂತ್ರ ಸರಕಾರ ‘ಆಝಾದ್ ಹಿಂದ್ ಸರಕಾರ’ದ ಸ್ಥಾಪನೆಯ ಬೋಸ್ ಅವರ ಘೋಷಣೆಯ 75ನೇ ವರ್ಷಾಚರಣೆ ಸಮಾರಂಭದಲ್ಲಿ ಪೊಲೀಸ್ ಸ್ಮಾರಕ ಮತ್ತು ವಸ್ತುಸಂಗ್ರಹಾಲಯವನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮೋದಿ,ಈ ವರ್ಷದಿಂದಲೇ ಈ ಪ್ರಶಸ್ತಿಯನ್ನು ನೀಡಲಾಗುವುದು. ನೇತಾಜಿಯವರ ಜನ್ಮದಿನವಾದ ಜ.23ರಂದು ಪ್ರಶಸ್ತಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಗಳ ಸಿಬ್ಬಂದಿಗಳು ಪೊಲೀಸ್ ಪಡೆಗಳಿಂದ ಬಂದವರು. ಯಾವುದೇ ವಿಪತ್ತಿನ ಸಂದರ್ಭದಲ್ಲಿ ಅವರ ಧೈರ್ಯ,ಅರ್ಪಣಾ ಮನೋಭಾವ ಮತ್ತು ತ್ಯಾಗಗಳನ್ನು ದೇಶವು ಮರೆಯುವುದಿಲ್ಲ. ಕಟ್ಟಡಗಳು ಕುಸಿದಾಗ,ಬೆಂಕಿ ಅವಘಡವುಂಟಾದಾಗ ಅಥವಾ ರೈಲು ಅಪಘಾತ ಸಂಭವಿಸಿದ ಸಂದರ್ಭಗಳಲ್ಲಿ ಅವರು ಜನರನ್ನು ರಕ್ಷಿಸಿ ಪರಿಹಾರವನ್ನೊದಗಿಸಿದಾಗ ಅವರು ಯಾರೆಂದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ ಎಂದು ಪ್ರಧಾನಿ ಭಾವೋದ್ವೇಗದ ಧ್ವನಿಯಲ್ಲಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News