ಮನನೊಂದ ನಿವೃತ್ತ ಶಿಕ್ಷಕನಿಂದ ಆತ್ಮಹತ್ಯೆ

Update: 2018-10-22 14:00 GMT

ಮಂಗಲದೋಯಿ,ಅ.22: ಅಸ್ಸಾಮ್‌ನಲ್ಲಿ ಇತ್ತೀಚಿಗೆ ಪರಿಷ್ಕೃತ ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಎನ್‌ಆರ್‌ಸಿ)ನಲ್ಲಿ ತನ್ನ ಹೆಸರು ನಾಪತ್ತೆಯಾಗಿದ್ದರಿಂದ ನೊಂದುಕೊಂಡಿದ್ದ ಇಲ್ಲಿಯ ನಿವೃತ್ತ ಶಿಕ್ಷಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜು.30ರಂದು ಎನ್‌ಆರ್‌ಸಿಯ ಪರಿಷ್ಕೃತ ಕರಡು ಪ್ರಕಟಗೊಂಡ ಬಳಿಕ ಇದು ಇಂತಹ ಮೂರನೇ ಘಟನೆಯಾಗಿದೆ.

34 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ನಿರೋದ ಕುಮಾರ ದಾಸ್(74) ಬಳಿಕ ಕಾನೂನು ವ್ಯಾಸಂಗ ಮಾಡಿ ಮಂಗಳದೋಯಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ರವಿವಾರ ಬೆಳಿಗ್ಗೆ ವಾಯುವಿಹಾರದಿಂದ ಮರಳಿದ ಬಳಿಕ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಎಸ್‌ಪಿ ಶ್ರೀಜಿತ್ ಟಿ. ತಿಳಿಸಿದರು.

ಆತ್ಮಹತ್ಯೆಗೆ ಮುನ್ನ ಚೀಟಿಯೊಂದನ್ನು ಬರೆದಿಟ್ಟಿರುವ ದಾಸ್,ಎನ್‌ಆರ್‌ಸಿ ಪ್ರಕ್ರಿಯೆ ಬಳಿಕ ತನ್ನನ್ನು ವಿದೇಶಿ ಪ್ರಜೆ ಎಂದು ಗುರುತಿಸಿದ್ದು,ಅವಹೇಳನದಿಂದ ಪಾರಾಗಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅದರಲ್ಲಿ ತಿಳಿಸಿದ್ದಾರೆ.

ದಾಸ್ ಅವರ ಪತ್ನಿ,ಮೂವರು ಪುತ್ರಿಯರು,ಅಳಿಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಎಲ್ಲ ಕುಟುಂಬ ಸದಸ್ಯರು ಹಾಗು ಹೆಚ್ಚಿನ ಬಂಧುಗಳ ಹೆಸರುಗಳು ಎನ್‌ಆರ್‌ಸಿಯಲ್ಲಿವೆ.

ಅಂತಿಮ ಎನ್‌ಆರ್‌ಸಿ ಕರಡಿನಿಂದ ತನ್ನ ಹೆಸರು ನಾಪತ್ತೆಯಾದ ಬಳಿಕ ದಾಸ್ ಹತಾಶರಾಗಿದ್ದರು. ಅವರನ್ನು ವಿದೇಶಿ ಪ್ರಜೆಯೆಂದು ಗುರುತಿಸಲಾಗಿದೆ ಎಂದು ಎರಡು ತಿಂಗಳ ಹಿಂದೆ ಎನ್‌ಆರ್‌ಸಿ ಸಂಸ್ಕರಣಾ ಕೇಂದ್ರವು ತಿಳಿಸಿದ ಬಳಿಕ ಇನ್ನಷ್ಟು ಹತಾಶರಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದರು.

ದಾಸ್ ತನ್ನ ಆತ್ಮಹತ್ಯಾ ಪತ್ರದಲ್ಲಿ ಯಾರನ್ನೂ ದೂರಿಲ್ಲ ಮತ್ತು ತಾನು ಐವರಿಂದ 1200 ರೂ.ಸಾಲ ಪಡೆದುಕೊಂಡಿದ್ದು ಅದನ್ನು ಅವರಿಗೆ ಮರಳಿಸುವಂತೆ ಕುಟುಂಬ ಸದಸ್ಯರಿಗೆ ಸೂಚಿಸಿದ್ದಾರೆ.

ರವಿವಾರ ಶವದ ಮರಣೋತ್ತರ ಪರೀಕ್ಷೆಗೆ ಅವಕಾಶ ನಿರಾಕರಿಸಿದ್ದ ಕುಟುಂಬ ಸದಸ್ಯರು ದಾಸ್ ಅವರನ್ನು ವಿದೇಶಿ ಎಂದು ಗುರುತಿಸಿದ್ದಕ್ಕಾಗಿ ಎನ್‌ಆರ್‌ಸಿ ಕೇಂದ್ರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಭರವಸೇನೀಡಿದ ಬಳಿಕವಷ್ಟೇ ಅವರು ತಮ್ಮ ಪಟ್ಟು ಸಡಿಲಿಸಿದ್ದರು.

ದಾಸ್ ಹೆಸರನ್ನು ಎನ್‌ಆರ್‌ಸಿಯಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಬಂಗಾಳಿ ವಿದ್ಯಾರ್ಥಿಗಳ ಒಕ್ಕೂಟದ ಕರೆಯ ಮೇರೆಗೆ ಸೋಮವಾರ ಬಂದ್ ಆಚರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News