ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಗೆ ಕೇಂದ್ರದಿಂದ ಸಮನ್ಸ್
ಹೊಸದಿಲ್ಲಿ,ಅ.22: ಕೇಂದ್ರ ತನಿಖಾ ಸಂಸ್ಥೆಯ ವಿಶೇಷ ಅಧಿಕಾರಿ ರಾಕೇಶ್ ಅಸ್ಥಾನ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಲಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಗೆ ಸಮನ್ಸ್ ಜಾರಿ ಮಾಡಿದೆ.
ಇದೇ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಸ್ಥಾನರ ಸಹಾಯಕ ಅಧಿಕಾರಿ ದೇವೇಂದ್ರ ಕುಮಾರ್‌ರನ್ನು ಸಿಬಿಐ ಬಂಧಿಸಿದೆ. ಅಸ್ಥಾನ, ಕುಮಾರ್ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಅಸ್ಥಾನ ಮತ್ತು ಸಿಬಿಐ ವಿಶೇಷ ತನಿಖಾ ತಂಡ (ಸಿಟ್)ದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರರ ವಿರುದ್ಧ ಸಿಬಿಐ ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಇತರ ಕಾಯ್ದೆಗಳಡಿ ಪ್ರಕರಣ ದಾಖಲಿಸಿದೆ.
ಮಾಂಸ ರಫ್ತುದಾರ ಮೊಯಿನ್ ಖುರೇಶಿ ವಿರುದ್ಧ ದಾಖಲಾಗಿದ್ದ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೊಳಪಟ್ಟಿದ್ದ ಹೈದರಾಬಾದ್ ಮೂಲದ ಉದ್ಯಮಿ ಸತೀಶ್ ಸನಾ ಹೇಳಿಕೆಯ ಆಧಾರದಲ್ಲಿ ರಾಕೇಶ್ ಅಸ್ಥಾನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವೊಂದರಲ್ಲಿ ತನ್ನ ಹೆಸರನ್ನು ಕೈಬಿಡಲು ಅಸ್ಥಾನ ಐದು ಕೋಟಿ ರೂ. ಲಂಚದ ಬೇಡಿಕೆಯಿಟ್ಟಿದ್ದರು ಎಂದು ಸನಾ ಆರೋಪಿಸಿದ್ದರು. ದುಬೈ ಮೂಲದ ಬ್ಯಾಂಕರ್ ಮನೋಜ್ ಪ್ರಸಾದ್ ಈ ವ್ಯವಹಾರದ ಮಧ್ಯವರ್ತಿಯಾಗಿದ್ದರು, ಅವರೇ ಈ ಲಂಚ ನೀಡುವಂತೆ ಕೇಳಿದ್ದರು ಎಂದು ಸನಾ ತನ್ನ ದೂರಿನಲ್ಲಿ ತಿಳಿಸಿದ್ದರು. ಸನಾ ಹೇಳಿಕೆಯನ್ನಾಧರಿಸಿ ಅಕ್ಟೋಬರ್ 15ರಂದು ಸಿಬಿಐ ಅಸ್ಥಾನ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಅಸ್ಥಾನ ಆಗಸ್ಟಾ ವೆಸ್ಟ್‌ಲ್ಯಾಂಡ್ ಚಾಪರ್ ಹಗರಣ ಮತ್ತು ವಿಜಯ್ ಮಲ್ಯ ಬ್ಯಾಂಕ್ ವಂಚನೆ ಪ್ರಕರಣ ಸೇರಿದಂತೆ ಪ್ರತಿಷ್ಟಿತರು ಭಾಗಿಯಾಗಿರುವ ಹಲವು ಪ್ರಕರಣಗಳ ತನಿಖೆ ನಡೆಸುವ ವಿಶೇಷ ತನಿಖಾ ತಂಡವನ್ನು ಮುನ್ನಡೆಸುತ್ತಿದ್ದರು. ಮಧ್ಯವರ್ತಿ ಮನೋಜ್ ಪ್ರಸಾದ್ ಬಂಧನವಾದ ಕೂಡಲೇ ಸಿಬಿಐ ಅಧಿಕಾರಿಗಳು ಪ್ರಸಾದ್ ಮತ್ತು ಅಸ್ಥಾನರ ಒಂಬತ್ತು ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದಾರೆ. ಈ ಕರೆಗಳಲ್ಲಿ ಇನ್ನೊಂದು ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿ ಪ್ರಸಾದ್‌ರ ಬಂಧನವನ್ನು ಖಚಿತಪಡಿಸಿಕೊಳ್ಳಲು ಅಸ್ಥಾನಗೆ ಕರೆ ಮಾಡಿರುವುದು ಮತ್ತು ಹಿರಿಯ ಅಧಿಕಾರಿ ಮತ್ತು ಮಧ್ಯವರ್ತಿ ಪ್ರಸಾದ್‌ರ ಸಹೋದರನ ಪತ್ನಿಯ ಮಧ್ಯೆ ಸಂಭಾಷಣೆ ನಡೆದಿರುವುದು ಪತ್ತೆಯಾಗಿದೆ.
ಅಸ್ಥಾನ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಡಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ
ಲಂಚ ಸ್ವೀಕಾರ ಆರೋಪಕ್ಕೆ ಸಿಲುಕಿರುವ ಸಿಬಿಐ ವಿಶೇಷ ತನಿಖಾ ತಂಡದ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಪ್ರಕರಣದಲ್ಲಿ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುವಂತೆ ಮತ್ತು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡದಂತೆ ಕಾಂಗ್ರೆಸ್ ಕೇಂದ್ರ ಸರಕಾರಕ್ಕೆ ಆಗ್ರಹಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಮಾಧ್ಯಮಗಳಲ್ಲಿ ಸಿಬಿಐ ವಿಶೇಷ ಅಧಿಕಾರಿವಿರುದ್ಧ ಕೇಳಿಬಂದಿರುವ ಆರೋಪವು ಸತ್ಯವೇ ಆಗಿದ್ದಲ್ಲಿ ಅದೊಂದು ಅತ್ಯಂತ ಗಂಭೀರವಾದ ವಿಷಯ. ರಾಕೇಶ್ ಅಸ್ಥಾನರನ್ನು ಆ ಸ್ಥಾನಕ್ಕೆ ನೇಮಕ ಮಾಡುವಾಗಲೇ ಎಲ್ಲರಿಂದ ಆಕ್ಷೇಪಗಳು ಎದುರಾಗಿದ್ದವು ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.
ಅಸ್ಥಾನ ಆ ಸ್ಥಾನದಲ್ಲಿರಲು ಇರಬಹುದಾದ ಎರಡು ಕಾರಣಗಳಲ್ಲಿ ಒಂದು ಅವರು ಬಂದಿರುವಂಥ ರಾಜ್ಯವು ಪ್ರಮುಖ ಪಾತ್ರವಹಿಸಿದ್ದರು ಇನ್ನೊಂದು ಅವರಿಗೆ ಆಳುವವರ ಜೊತೆ ಸಾಮಿಪ್ಯ ಕಾರಣವಾಗಿರಬಹುದು ಎಂದು ಸಿಂಘ್ವಿ ತಿಳಿಸಿದ್ದಾರೆ.