ಕಾಂಗ್ರೆಸ್ ದೂರಿನ ಬಳಿಕ ಭಿಂದ್ ಜಿಲ್ಲಾಧಿಕಾರಿಯ ಎತ್ತಂಗಡಿ
ಭೋಪಾಲ,ಅ.22: ಚುನಾವಣೆಗಳು ಸನ್ನಿಹಿತವಾಗಿರುವ ಮಧ್ಯಪ್ರದೇಶದ ಭಿಂದ್ ಜಿಲ್ಲಾಧಿಕಾರಿ ಆಶಿಷ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಚುನಾವಣಾಧಿಕಾರಿಗಳು ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ರಾಜ್ಯ ಸರಕಾರವು ರವಿವಾರ ಸಂಜೆ ಕುಮಾರ್ ವರ್ಗಾವಣೆ ಆದೇಶವನ್ನು ಹೊರಡಿಸಿದ್ದು,ಅವರ ಸ್ಥಾನಕ್ಕೆ ಧನರಾಜ ಎಸ್. ರಾಜು ಅವರನ್ನು ನಿಯೋಜಿಸಿದೆ ಎಂದು ಹಿರಿಯ ಅಧಿಕಾರಿಯೋರ್ವರು ಸೋಮವಾರ ಇಲ್ಲಿ ತಿಳಿಸಿದರು.
ಕುಮಾರ್ ಅವರನ್ನು ರಾಜ್ಯ ಸಚಿವಾಲಯದ ಉಪ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಗಣಿಗಳ ಹಂಚಿಕೆ, ಅಕ್ರಮ ಮರಳುಗಾರಿಕೆ ಮತ್ತು ಸಾಗಾಣಿಕೆ ಹಾಗೂ ಮತದಾರರ ಪಟ್ಟಿಗಳ ಸಿದ್ಧತೆ ಇವುಗಳಿಗೆ ಸಂಬಂಧಿಸಿದಂತೆ ಪಕ್ಷದ ನಿಯೋಗವು ಮುಖ್ಯ ಚುನಾವಣಾ ಆಯುಕ್ತರು,ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಕುಮಾರ್ ವಿರುದ್ಧ ದೂರುಗಳನ್ನು ಸಲ್ಲಿಸಿತ್ತು ಮತ್ತು ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿತ್ತು ಎಂದು ಕಾಂಗ್ರೆಸ್ ಶಾಸಕ ಗೋವಿಂದ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಭಿಂದ್‌ನಲ್ಲಿ ಮತದಾರರ ಪಟ್ಟಿಗಳಲ್ಲಿ ಸೇರಿಸಲಾಗಿರುವ ಕೆಲವು ಹೆಸರುಗಳು ಉತ್ತರ ಪ್ರದೇಶದ ನಿವಾಸಿಗಳದ್ದಾಗಿವೆ ಎಂದು ಕಾಂಗ್ರೆಸ್ ಆರೋಪಿಸಿತ್ತು.