4 ವರ್ಷಗಳಲ್ಲಿ ಭಾರತದ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಶೇ.60ರಷ್ಟು ಏರಿಕೆ: ಸಿಬಿಡಿಟಿ

Update: 2018-10-22 16:55 GMT

ಹೊಸದಿಲ್ಲಿ,ಅ.22: ಕಳೆದ ನಾಲ್ಕು ವರ್ಷಗಳಲ್ಲಿ ವಾರ್ಷಿಕ ಒಂದು ಕೋಟಿ ರೂ.ಗೂ ಅಧಿಕ ಆದಾಯ ಗಳಿಸುತ್ತಿರುವ ತೆರಿಗೆದಾತರ ಸಂಖ್ಯೆಯಲ್ಲಿ ಶೇ.60ರಷ್ಟು ಏರಿಕೆಯಾಗಿದ್ದು,1.40 ಲಕ್ಷವನ್ನು ದಾಟಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು ಸೋಮವಾರ ತಿಳಿಸಿದೆ.

ನಾಲ್ಕು ವರ್ಷಗಳ ಅವಧಿಯ ಆದಾಯ ತೆರಿಗೆ ಮತ್ತು ನೇರ ತೆರಿಗೆಗಳ ಪ್ರಮುಖ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ ಮಂಡಳಿಯು ಕಾರ್ಪೊರೇಟ್‌ಗಳು, ಸಂಸ್ಥೆಗಳು, ಹಿಂದು ಅವಿಭಕ್ತ ಕುಟುಂಬ ಇತ್ಯಾದಿಗಳು ಸೇರಿದಂತೆ ವಾರ್ಷಿಕ ಒಂದು ಕೋಟಿ ರೂ.ಗೂ ಆದಾಯವಿರುವವರ ಸಂಖ್ಯೆಯು ತೀವ್ರ ಏರಿಕೆಯನ್ನು ದಾಖಲಿಸಿದೆ. 2014-15ನೇ ತೆರಿಗೆ ಸಾಲಿನಲ್ಲಿ 88,649 ತೆರಿಗೆದಾತರು ಒಂದು ಕೋ.ರೂ.ಗೂ ಅಧಿಕ ಆದಾಯವನ್ನು ಘೋಷಿಸಿದ್ದರೆ 2017-18ನೇ ಸಾಲಿಗೆ ಈ ಸಂಖ್ಯೆ 1,40,139 ಕ್ಕೇರಿದ್ದು,ಸುಮಾರು ಶೇ.60ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

 ಇದೇ ರೀತಿ,ಈ ಅವಧಿಯಲ್ಲಿ ವ್ಯಕ್ತಿಗತವಾಗಿ ವಾರ್ಷಿಕ ಒಂದು ಕೋ.ರೂ.ಗೂ ಅಧಿಕ ಆದಾಯವನ್ನು ಘೋಷಿಸಿಕೊಂಡಿರುವವರ ಸಂಖ್ಯೆ 48,416ರಿಂದ 81,344ಕ್ಕೇರಿದ್ದು,ಶೇ.68ರಷ್ಟು ಹೆಚ್ಚಳವಾಗಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆಯು ಕೈಗೊಂಡ ಹಲವಾರು ಕ್ರಮಗಳ ಫಲಶ್ರತಿಯಾಗಿದೆ ಎಂದ ಸಿಬಿಡಿಟಿ ಅಧ್ಯಕ್ಷ ಸುಶೀಲಚಂದ್ರ ಅವರು,ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿದವರ ಸಂಖ್ಯೆಯೂ 3.79 ಕೋಟಿಯಿಂದ 6.85 ಕೋಟಿಗೇರಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News