ರೈಲಿನ ಚಾಲಕನ ಹೇಳಿಕೆ ಸುಳ್ಳು: ಸಂತ್ರಸ್ತರ ಆಕ್ರೋಶ

Update: 2018-10-22 17:34 GMT

ಹೊಸದಿಲ್ಲಿ, ಅ.22: ಶುಕ್ರವಾರ ಸಂಭವಿಸಿದ ರೈಲು ದುರಂತದ ಬಗ್ಗೆ ರೈಲಿನ ಚಾಲಕ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಸಂತ್ರಸ್ತರು ಹಾಗೂ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ದಸರಾ ಕಾರ್ಯಕ್ರಮವನ್ನು ವೀಕ್ಷಿಸಲು ಸ್ಥಳದಲ್ಲಿ ನೆರೆದಿದ್ದ ಜನರು ರೈಲಿನತ್ತ ಕಲ್ಲೆಸೆತಕ್ಕೆ ಆರಂಭಿಸಿದ ಕಾರಣ ತಾನು ರೈಲನ್ನು ನಿಲ್ಲಿಸಲಿಲ್ಲ ಎಂದು ರೈಲಿನ ಚಾಲಕ ರೈಲ್ವೇ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾನೆ. ಆದರೆ ತಾನು ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ರೈಲನ್ನು ನಿಲ್ಲಿಸುವುದು ಹಾಗಿರಲಿ, ಕನಿಷ್ಟ ವೇಗವನ್ನು ತಗ್ಗಿಸಲೂ ಆತ ಪ್ರಯತ್ನಿಸಿಲ್ಲ. ನಮ್ಮನ್ನು ಅಪ್ಪಚ್ಚಿ ಮಾಡಲು ಆತ ಸಂಪೂರ್ಣ ಸಿದ್ಧನಾಗಿರುವಂತೆ ಕಾಣುತ್ತಿತ್ತು. ಶರವೇಗದಲ್ಲಿ ಧಾವಿಸಿ ಬಂದ ರೈಲು ಕ್ಷಣಾರ್ಧದಲ್ಲಿ ಕಣ್ಮರೆಯಾಯಿತು ಎಂದು ಸ್ಥಳೀಯ ಪುರಸಭೆ ಕೌನ್ಸಿಲರ್ ಶೈಲೇಂದರ್ ಸಿಂಗ್ ಹೇಳಿದ್ದಾರೆ.

ಅಷ್ಟೊಂದು ಮಂದಿ ನಮ್ಮ ಸುತ್ತ ಸತ್ತುಬಿದ್ದಿರುವಾಗ ಅಥವಾ ಗಾಯಗೊಂಡು ನರಳಾಡುತ್ತಿರುವಾಗ ಕಲ್ಲೆಸೆತದಲ್ಲಿ ತೊಡಗಲು ಸಾಧ್ಯವೇ. ದುರಂತದ ಭೀಕರತೆಯಿಂದ ಆಘಾತಕ್ಕೊಳಗಾಗಿದ್ದ ಜನತೆ ಶರವೇಗದಲ್ಲಿ ಧಾವಿಸುತ್ತಿರುವ ರೈಲಿನ ಮೇಲೆ ಕಲ್ಲೆಸೆತ ನಡೆಸಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ. ರೈಲು ಎಷ್ಟು ವೇಗದಲ್ಲಿ ಧಾವಿಸುತ್ತಿತ್ತು ಎಂಬುದನ್ನು ಹಲವಾರು ವೀಡಿಯೋಗಳು ದೃಢಪಡಿಸಿವೆ ಎಂದವರು ಹೇಳಿದರು.

ರೈಲು ಹಾದು ಹೋದ ತಕ್ಷಣ ಜನರ ಚೀರಾಟ, ನರಳಾಟ ಕೇಳಿ ಬಂದಿದೆ. ಆದರೆ ಯಾರೂ ಕಲ್ಲೆಸೆದಿದ್ದನ್ನು ತಾನು ಕಂಡಿಲ್ಲ. ರೈಲಿನ ವೇಗವನ್ನು ಗಮನಿಸಿದರೆ, ಜನರು ಕಲ್ಲನ್ನು ಸಂಗ್ರಹಿಸಿ ಬಿಸಾಡಲು ಮುಂದಾಗುವುದರೊಳಗೆ ರೈಲು ಹಾದುಹೋಗುವುದರಲ್ಲಿ ಸಂಶಯವಿಲ್ಲ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ರೈಲಿನ ಹಳಿಯ ಮೇಲೆ ಹಲವು ಜನರಿರುವುದನ್ನು ಕಂಡು ತಾನು ತುರ್ತು ಬ್ರೇಕನ್ನು ಅದುಮಿದ್ದೆ . ರೈಲು ಬಹುತೇಕ ನಿಲುಗಡೆಯ ಸ್ಥಿತಿಗೆ ಬಂದಿತ್ತು. ಆದರೆ ಆಗ ಕೆಲವರು ರೈಲಿನತ್ತ ಕಲ್ಲೆಸೆಯಲು ಆರಂಭಿಸಿದರು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲನ್ನು ನಿಲ್ಲಿಸದಿರಲು ತಾನು ನಿರ್ಧರಿಸಿದೆ ಎಂದು ಶನಿವಾರ ನೀಡಿದ್ದ ಹೇಳಿಕೆಯಲ್ಲಿ ಚಾಲಕ ತಿಳಿಸಿದ್ದ.

ಶುಕ್ರವಾರ ಅಪಘಾತಕ್ಕೆ ಕಾರಣವಾದ ರೈಲು ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್(ಡೆಮು) ರೈಲಾಗಿದ್ದು ಗರಿಷ್ಠ ವೇಗ ಗಂಟೆಗೆ 96 ಕಿ.ಮೀ. ಆಗಿದೆ. ಚಲಿಸುತ್ತಿರುವ ರೈಲಿನ ಬ್ರೇಕ್ ಅದುಮಿದರೆ ರೈಲು ಖಾಲಿಯಿದ್ದರೆ 300 ಮೀಟರ್‌ನಷ್ಟು ದೂರ ಚಲಿಸಿ ನಿಲುಗಡೆಯಾಗುತ್ತದೆ. ಪ್ರಯಾಣಿಕರಿಂದ ಭರ್ತಿಯಾಗಿದ್ದರೆ ಸುಮಾರು 600 ಮೀಟರ್‌ನಷ್ಟು ಚಲಿಸಿ ನಿಲುಗಡೆಯಾಗುತ್ತದೆ. ಅಪಘಾತಕ್ಕೆ ಮೊದಲು ಈ ರೈಲಿನ ಪ್ರಯಾಣ ವೇಗ ಗಂಟೆಗೆ 68 ಕಿ.ಮೀ. ದಾಖಲಾಗಿತ್ತು ಎಂದು ಫಿರೋಝ್‌ಪುರ ರೈಲ್ವೇ ವಿಭಾಗೀಯ ಅಧಿಕಾರಿ ವಿವೇಕ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News