ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ: ಕಾಶ್ಮೀರ ಸರ್ಕಾರಿ ಆದೇಶಕ್ಕೆ ಆಕ್ರೋಶ

Update: 2018-10-23 04:11 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಅ.23: ಧಾರ್ಮಿಕ ಗ್ರಂಥಗಳಾದ ರಾಮಾಯಣ ಮತ್ತು ಭಗವದ್ಗೀತೆಯನ್ನು ಜಮ್ಮು-ಕಾಶ್ಮೀರದ ಎಲ್ಲ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂಬ ಸರ್ಕಾರಿ ಆದೇಶ, ಮುಸ್ಲಿಂ ಬಾಹುಳ್ಯದ ರಾಜ್ಯದಲ್ಲಿ ಹೊಸ ವಿವಾದ ಹುಟ್ಟುಹಾಕಿದೆ.

"ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾಲೇಜು ನಿರ್ದೇಶಕರು, ಗ್ರಂಥಾಲಯಗಳ ನಿರ್ದೇಶಕರು ಮತ್ತು ಸಂಸ್ಕೃತಿ ಇಲಾಖೆ, ಸರ್ವಾನಂದ ಪ್ರೇಮಿಯವರು ಬರೆದ "ಶ್ರೀಮದ್ ಭಗವದ್ಗೀತೆ" ಮತ್ತು "ಕೊಶೂರ್ ರಾಮಾಯಣ"ದ ಉರ್ದು ಭಾಷಾ ಪ್ರತಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಖರೀದಿಸಬೇಕು ಮತ್ತು ಎಲ್ಲ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಇವು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು" ಎಂದು ಶಾಲಾ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಸಹಿ ಮಾಡಿರುವ ಆದೇಶದಲ್ಲಿ ಹೇಳಲಾಗಿದೆ.

ಅಧಿಕೃತ ಆದೇಶದ ಪ್ರಕಾರ, ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸಲಹೆಗಾರ ಬಿ.ಬಿ.ವ್ಯಾಸ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 4ರಂದು ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಆದೇಶವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ. ಶಾಲೆ, ಕಾಲೇಜು ಮತ್ತು ಗ್ರಂಥಾಲಯಗಳಲ್ಲಿ ಧಾರ್ಮಿಕ ಗ್ರಂಥಗಳನ್ನು ಅದರಲ್ಲೂ ಮುಖ್ಯವಾಗಿ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಗ್ರಂಥಗಳನ್ನು ಮಾತ್ರ ಲಭ್ಯವಾಗುವಂತೆ ಮಾಡಿರುವ ಕ್ರಮಕ್ಕೆ ಸಮರ್ಥನೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.

"ಕೇವಲ ಗೀತೆ ಹಾಗೂ ರಾಮಾಯಣ ಏಕೆ? ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಗ್ರಂಥಾಲಯಗಳಲ್ಲಿ ಧಾರ್ಮಿಕ ಗ್ರಂಥಗಳನ್ನು ಇಡುವುದಾದರೆ, ಅದರಲ್ಲಿ ನಿರ್ದಿಷ್ಟ ಧರ್ಮದ ಗ್ರಂಥಗಳನ್ನು ಮಾತ್ರ ಏಕೆ ಪರಿಗಣಿಸಲಾಗಿದೆ? ಇತರ ಧರ್ಮಗಳನ್ನು ಏಕೆ ನಿರ್ಲಕ್ಷಿಸಲಾಗಿದೆ? ಎಂದು ಅವರು ಟ್ವೀಟ್ ಮಾಡಿದ್ದಾರೆ.

2011ರ ಜನಗಣತಿ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಶೇಕಡ 68 ಇದ್ದರೆ, ಹಿಂದೂಗಳು ಶೇಕಡ 28ರಷ್ಟಿದ್ದಾರೆ. ಸಿಕ್ಖ್ ಹಾಗೂ ಬೌದ್ಧ ಧರ್ಮದವರು ಕ್ರಮವಾಗಿ ಶೇಕಡ 1.9 ಹಾಗೂ 0.9ರಷ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News